‘ಸಮಾನತೆಯ ಗ್ರಾಮ’ ಉದ್ಘಾಟಿಸಿದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

Update: 2022-04-05 18:14 GMT

ಚೆನ್ನೈ, ಎ. 5: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿಲ್ಲುಪುರಂ ಜಿಲ್ಲೆಯಲ್ಲಿ ಮಂಗಳವಾರ ಸಮತ್ವಪುರಂ (ಸಮಾನತೆಯ ಗ್ರಾಮ) ಅನ್ನು ಉದ್ಘಾಟಿಸಿದರು. ದ್ರಾವಿಡ ಮಾದರಿಯು ಸಮಾನತೆ ಸಾಧಿಸುವ ಏಕೈಕ ಮಾರ್ಗ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಮತಾವಾದಿ ಸಮಾಜದ ಖಾತರಿ ನೀಡಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನ ನಾಯಕ ಹಾಗೂ ಅವರ ತಂದೆ ಕಲೈಂಞಾರ್ ಕರುಣಾನಿಧಿ ಅವರು ಸಮತ್ವಪುರಂ ಪರಿಕಲ್ಪನೆಯನ್ನು ಪರಿಚಯಿಸಿದರು ಎಂದು ಸ್ಟಾಲಿನ್ ಹೇಳಿದರು. ಜಾತಿ ಹಾಗೂ ಧಾರ್ಮಿಕ ಸಮಸ್ಯೆಗಳಲ್ಲಿ ಮುಳುಗಿರುವ ಸಮಾಜವನ್ನು ಪುನರುಜ್ಜೀವನಗೊಳಿಸಲು ಪೆರಿಯಾರ್ ಅವರು ಈ ಸಮಾನತೆಯ ಗ್ರಾಮ ಯೋಜನೆಗೆ ಹೆಸರು ಇರಿಸಿದ್ದರು. ಈ ಯೋಜನೆ ಅಡಿಯಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡ ನೂತನವಾಗಿ ಅಭಿವೃದ್ಧಿಗೊಳಿಸಲಾದ ವಸತಿ ಪ್ರದೇಶದಲ್ಲಿ ವಿವಿಧ ಸಮುದಾಯಗಳ ಜನರು ಸಂಘಟಿತರಾಗಿ ವಾಸಿಸುತ್ತಾರೆ.

ದೇಶಾದ್ಯಂತ ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತಮಿಳುನಾಡು ಮುಂಚೂಣಿಯಲ್ಲಿ ಇದೆ ಎಂದು ಪ್ರತಿಪಾದಿಸಿದ ಸ್ಟಾಲಿನ್, ಇದು ದ್ರಾವಿಡ ಮಾದರಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ‘‘ಪ್ರತಿ ಮನೆಯ ಹಿಂದೆ ಹೂದೋಟ ರೂಪಿಸಿದ ಹಾಗೂ ಅಲ್ಲಿ ಸಮಾನತೆಯಲ್ಲಿ ವಾಸಿಸಲಿರುವ ಕುಟುಂಬಗಳಿಗೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ದ್ರಾವಿಡ ಮಾದರಿಯ ಈ ಯೋಜನೆ ಸಮಾನತೆಯ ಉದ್ದೇಶ ಹೊಂದಿದೆ’’ ಎಂದು ಸ್ಟಾಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News