ತಿನಿಸು ಪ್ಯಾಕೆಟ್‍ನಲ್ಲಿ 'ಉರ್ದು ಬರಹ' ಪ್ರಶ್ನಿಸಿ ಪತ್ರಕರ್ತೆಯಿಂದ ತರಾಟೆ: ಟ್ರೆಂಡಿಂಗ್‌ ಆದ ಹಲ್ದಿರಾಮ್

Update: 2022-04-06 10:44 GMT

ಹೊಸದಿಲ್ಲಿ: ಖ್ಯಾತ ಆಹಾರ ತಯಾರಿಕಾ ಕಂಪೆನಿ ಹಲ್ದೀರಾಮ್ಸ್ ಇದರ ತಿನಿಸು ಪ್ಯಾಕೆಟ್ ಒಂದರಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವುದನ್ನು ಪ್ರಶ್ನಿಸಿ ಸುದರ್ಶನ್ ಟಿವಿ ಪತ್ರಕರ್ತೆಯೊಬ್ಬರು ಅಲ್ಲಿನ ಸ್ಟೋರ್ ಮ್ಯಾನೇಜರ್ ಒಬ್ಬರೊಂದಿಗೆ ವಾಗ್ವಾದಕ್ಕಿಳಿದ ವಿಚಾರ ಸಾಕಷ್ಟು ಸುದ್ದಿಯಾಗಿದೆಯಲ್ಲದೆ ಘಟನೆಯ ನಂತರ ಹಲ್ದೀರಾಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಹಿಜಾಬ್, ಹಲಾಲ್ ಮತ್ತು ಆಝಾನ್ ವಿವಾದಕ್ಕೆ ಈ ಉರ್ದು ಬರಹ ವಿಚಾರ ಹೊಸ ಸೇರ್ಪಡೆಯಾಗಿ ಬಿಟ್ಟಿದೆ.

ಈ ರೀತಿ ಉರ್ದು ಭಾಷೆಯಲ್ಲೂ ತಿನಿಸು ಪ್ಯಾಕೆಟ್‍ಗಳಲ್ಲಿ ಬರೆದು "ನವರಾತ್ರಿ ಉಪವಾಸದಲ್ಲಿರುವ ಹಿಂದುಗಳಿಗೆ ದ್ರೋಹವೆಸಗಲಾಗುತ್ತದೆ" ಎಂದು ಆ ಪತ್ರಕರ್ತೆ ದೊಡ್ಡ ದನಿಯಲ್ಲಿ ಸ್ಟೋರ್ ಮ್ಯಾನೇಜರ್ ಜತೆಗೆ ಜಗಳವಾಡುತ್ತಿದ್ದಂತೆಯೇ ಆತ ಆಕೆಯ ಮಾತುಗಳಿಗೆ ಸೊಪ್ಪು ಹಾಕದೆ "ನೀವು ಏನು ಬೇಕಾದರೂ ಮಾಡಿ ಮ್ಯಾಡಂ, ಹಲ್ದೀರಾಮ್ಸ್ ಇಂತಹ ವಿಚಾರಕ್ಕೆ ಕಿವಿಗೊಡುವುದಿಲ್ಲ" ಎಂದು ಹೇಳುತ್ತಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ಯಾಕೆಟ್‍ನಲ್ಲಿ ಅರಬಿಕ್ ಭಾಷೆಯಲ್ಲಿ ಬರೆಯಲಾಗಿದೆ ಹಾಗೂ ಉತ್ಪನ್ನವನ್ನು ಮಧ್ಯಪೂರ್ವ ದೇಶಗಳಿಗೆ ರಫ್ತು ಮಾಡಲಾಗುತ್ತಿರುವುದರಿಂದ ಅರಬಿಕ್ ಭಾಷೆಗಳಲ್ಲಿ ಬರೆಯಲಾಗಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಭಾರತೀಯ ರೈಲ್ವೆಯ ಸೂಚನಾ ಫಲಕಗಳಿಂದ ಹಿಡಿದು ಕರೆನ್ಸಿ ನೋಟುಗಳಲ್ಲಿಯೂ ಉರ್ದು ಬರಹವಿರುವುದನ್ನು ಉಲ್ಲೇಖಿಸಿದ್ದಾರೆ.

"ಈಗ ಹಲ್ದಿ ರಾಮ್ ಕೂಡ ದೇಶ ವಿರೋಧಿಯಾಗಿ ಬಿಟ್ಟ" ಎಂದು ಒಬ್ಬ ಟ್ವಿಟ್ಟರಿಗರು ಪ್ರತಿಕ್ರಿಯಿಸಿದರೆ ಇನ್ನೊಬ್ಬರು ಕರೆನ್ಸಿ ನೋಟಿನಲ್ಲಿರುವ ಉರ್ದು ಬರಹವನ್ನು ಉಲ್ಲೇಖಿಸಿ "ಬಹಿಷ್ಕಾರ ಗ್ಯಾಂಗ್, ಈಗ ಭಾರತೀಯ ಕರೆನ್ಸಿಯನ್ನು ಬಹಿಷ್ಕರಿಸೋಣ"ಎಂದು ಹೇಳುವ ಮೂಲಕ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ತನ್ನ ಇಸ್ಲಾಂ ವಿರೋಧಿ ವಿಷಯದ ಕಾರ್ಯಕ್ರಮಗಳಿಗಾಗಿ ಈಗಾಗಲೇ ಸಾಕಷ್ಟು ಬಾರಿ ಸುಪ್ರೀಂ ಕೋರ್ಟ್‍ನಿಂದ ತರಾಟೆಗೊಳಗಾಗಿರುವ ಸುದರ್ಶನ್ ಟಿವಿ  ಹಲವಾರು ವಿವಾದಿತ ಕಾರ್ಯಕ್ರಮಗಳನ್ನು  ಪ್ರಸಾರ ಮಾಡಿದ್ದರೂ ಸರಕಾರ ಅದರ ವಿರುದ್ಧ ಕ್ರಮಕೈಗೊಂಡಿಲ್ಲ. "ಮುಸ್ಲಿಮರನ್ನು ಸರಕಾರಿ ಸೇವೆಗಳಿಗೆ ನುಸುಳಿಸುವ ಷಡ್ಯಂತ್ರ" ಮುಂತಾದ ವಿವಾದಿತ ಕಾರ್ಯಕ್ರಮಗಳನ್ನೂ ಈ ವಾಹಿನಿ ಪ್ರಸಾರ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News