"ಪೂರ್ವಾನುಮತಿಯಿಲ್ಲದೆ ದೇಶ ಬಿಟ್ಟು ತೆರಳಬಾರದು": ಆಕಾರ್ ಪಟೇಲ್‍ಗೆ ಸೂಚಿಸಿದ ಸಿಬಿಐ ಕೋರ್ಟ್

Update: 2022-04-08 12:30 GMT

 ಹೊಸದಿಲ್ಲಿ: ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ದೇಶ ಬಿಟ್ಟು ತೆರಳಬಾರದು ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ಇಂದು ಸೂಚಿಸಿದ್ದಾರೆ.

ಪಟೇಲ್ ಅವರ ವಿರುದ್ಧದ ಲುಕೌಟ್ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಸಿಬಿಐಗೆ  ಗುರುವಾರ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಪವನ್ ಕುಮಾರ್ ಅವರು ಸೂಚಿಸಿದ್ದರು. ಆದರೆ ನ್ಯಾಯಾಧೀಶರು ತಮ್ಮ ಆದೇಶವನ್ನು ಪರಿಷ್ಕರಿಸಬೇಕೆಂದು ಸಿಬಿಐ ಕೋರಿದೆ. ಶುಕ್ರವಾರ ಸಂಜೆ 4 ಗಂಟೆಯೊಳಗೆ ಆದೇಶ ಪಾಲನಾ ವರದಿ ಸಲ್ಲಿಸಬೇಕೆಂದು ಹಾಗೂ ಪಟೇಲ್ ಅವರಿಗೆ ಲಿಖಿತ ಕ್ಷಮಾಪಣೆ ಸಲ್ಲಿಸಬೇಕು ಎಂದು ದಿಲ್ಲಿಯ ನ್ಯಾಯಾಲಯ ಸಿಬಿಐಗೆ ತನ್ನ ಗುರುವಾರದ ಆದೇಶದಲ್ಲಿ ಸೂಚಿಸಿದ್ದಕ್ಕೂ ಇಂದು  ಸಿಬಿಐ ನ್ಯಾಯಾಲಯ ತಡೆ ಹೇರಿದೆ.

ಸಿಬಿಐ ಪರ ಹಾಜರಿದ್ದ ವಕೀಲ ನಿಖಿಲ್ ಗೋಯಲ್ ಮಾತನಾಡಿ  ದಿಲ್ಲಿ ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಸಲ್ಲಿಸಲು ಸಿಬಿಐಗೆ ಸಮಯ ನೀಡಲಾಗಿಲ್ಲ ಎಂದು ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್ 12ರಂದು ನಡೆಯಲಿದೆ.

ಪಟೇಲ್ ಅವರನ್ನು ಬುಧವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಾಗೆ ತೆರಳಲು ವಿಮಾನವೇರಲು ನಿರಾಕರಿಸಿ ತಡೆಹಿಡಿಯಲಾಗಿತ್ತು. ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಇಂಡಿಯಾ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮನ್ನು ಎಕ್ಸಿಟ್ ಕಂಟ್ರೋಲ್ ಲಿಸ್ಟ್ ನಲ್ಲಿ ಇರಿಸಲಾಗಿದೆ ಎಂದು ಆಕಾರ್ ಪಟೇಲ್ ಟ್ವೀಟ್ ನಂತರ ಟ್ವೀಟ್ ಮಾಡಿದ್ದರು.

ಈ ನಿರ್ದಿಷ್ಟ ಅಮೆರಿಕಾ ಪ್ರವಾಸ ಕೈಗೊಳ್ಳಲು ಗುಜರಾತ್ ನ್ಯಾಯಾಲಯವೊಂದು ತಮಗೆ ಅನುಮತಿ ನೀಡಿರುವ ಹೊರತಾಗಿಯೂ ತಮ್ಮನ್ನು ತಡೆಹಿಡಿಯಲಾಗಿದೆ ಎಂದು ಪಟೇಲ್ ಹೇಳಿದ್ದರು.

ನವೆಂಬರ್ 2019ರಲ್ಲಿ ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಇಂಡಿಯಾ ಮತ್ತು ಅದರ ಇತರ ಸಹ ಸಂಸ್ಥೆಗಳಾದ  ಇಂಡಿಯನ್ಸ್ ಫಾರ್ ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಟ್ರಸ್ಟ್,  ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಮತ್ತು ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಸೌತ್ ಏಷ್ಯಾ ಫೌಂಡೇಶನ್ ವಿರುದ್ಧ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ 2010 ಹಾಗೂ ಐಪಿಸಿ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News