×
Ad

ದ.ಕ.ದಲ್ಲಿ ಕನ್ನಡ ಭಾಷಾ ಅನುಷ್ಠಾನ ತೃಪ್ತಿದಾಯಕ: ಟಿ.ಎಸ್. ನಾಗಾಭರಣ

Update: 2022-04-08 19:08 IST

ಮಂಗಳೂರು : ದ.ಕ. ಜಿಲ್ಲೆಯ ಕನ್ನಡ ಭಾಷೆ ಶುದ್ಧ ಮಾತ್ರವಲ್ಲದೆ, ವಿವಿಧ ಇಲಾಖೆಗಳು, ಸಾರ್ವಜನಿಕ ಸಂಸ್ಥೆ ಗಳಲ್ಲಿ  ಸಣ್ಣ ಪುಟ್ಟ ಲೋಪಗಳ ಹೊರತಾಗಿಯೂ ಕನ್ನಡ ಭಾಷಾ ಅನುಷ್ಠಾನ ಮಾದರಿ ರೂಪದಲ್ಲಿ ಸಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖ್ಯಸ್ಥರ ಜತೆ ಕನ್ನಡ ಅನುಷ್ಠಾನದ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಕನ್ನಡ ಶುದ್ಧವಾಗಿದೆ. ಅಧಿಕಾರಿಗಳು ಕೂಡ ಕನ್ನಡ ಮನಸ್ಸಿನ ವರಾಗಿದ್ದಾರೆ.  ಇಲ್ಲಿನ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ,  ಪೊಲೀಸ್ ಹಾಗೂ ಪಾಲಿಕೆ ಆಯುಕ್ತರು ಕೂಡ ಶುದ್ಧ ಕನ್ನಡ ಮಾತನಾಡುತ್ತಿದ್ದು, ಕನ್ನಡದ ಕೆಲಸವನ್ನು ಪ್ರೀತಿಯಿಂದ ಮಾಡಿರುವುದು ಗೊತ್ತಾಗುತ್ತದೆ. ಆಡಳಿತದಲ್ಲೂ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನ್ನಡ ಕಲಿಕೆ ಮತ್ತು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಸಂದರ್ಭ ಕನ್ನಡ ಕಲಿಕೆಗೆ ವಿದೇಶದಲ್ಲಿ ಆನ್‌ಲೈನ್ ಮೂಲಕ ಅಭಿಯಾನ ನಡೆಸಲಾಗಿದೆ. ಅನಿವಾಸಿ ಕನ್ನಡಿಗರಿರುವ 56 ದೇಶಗಳಲ್ಲಿ ಮಾಹಿತಿ ಸಂಗ್ರಹಿಸಿ ಈಗಾಗಲೇ ಸುಮಾರು 18 ದೇಶಗಳಲ್ಲಿ ಕನ್ನಡ ಕಲಿಕೆ ಕಾರ್ಯಾಗಾರ ನಡೆಸಲಾಗಿದೆ. ಅನಿವಾಸಿ ಕನ್ನಡಿಗರು, ಮಕ್ಕಳು ಈ ಕಾರ್ಯಾಗಾರದ ಪ್ರಯೋಜನ ಪಡೆದಿ ದ್ದಾರೆ. ಇದರಿಂದಾಗಿ ಕನ್ನಡ ಕಲಿಕೆಗೆ ಸಾಕಷ್ಟು ಬೇಡಿಕೆ ಅನಿವಾಸಿ ಕನ್ನಡಿಗರಿಂದ ಬರುತ್ತಿದೆ. ಅಲ್ಲಿ ಸಾಧ್ಯವಾಗಿರುವುದು ಇಲ್ಲಿ ಯಾಕೆ ಅಸಾಧ್ಯ ಎಂದು ನಾಗಾಭರಣ ಪ್ರಶ್ನಿಸಿದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸುವ ಸಂಬಂಧ ನಿಯಮ ಜಾರಿಗೆ ತರಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸರೋಜಿನಿ ಮಹಿಷಿ ವರದಿ ಪ್ರಕಾರ ಕೈಗಾರಿಕೆಗಳಲ್ಲಿ ಶೇ.೭೦ರಷ್ಟು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಕಾಯ್ದೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ. ಈಗ ಕೇವಲ ವರದಿ ಮಾತ್ರ ಇದ್ದು, ಇದು ಕಾಯ್ದೆ ರೂಪದಲ್ಲಿ ಇಲ್ಲದ ಕಾರಣ ತ್ರಿಭಾಷಾ ಸೂತ್ರದಡಿ ಕನ್ನಡಿಗರಿಗೆ ಗರಿಷ್ಠ ಉದ್ಯೋಗ ನೀಡಲು ತೊಡಕಾಗಿದೆ. ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ೧೭೦ ಉದ್ಯೋಗ ಪೈಕಿ ಕನ್ನಡಿಗರಿಗೆ ಉದ್ಯೋಗ ಲಭಿಸಿದ್ದು, ಕೇವಲ ೧೪ ಮಂದಿಗೆ ಮಾತ್ರ. ಕರ್ನಾಟಕದ ನಾಲ್ಕು ಕಡೆ ಆಯ್ಕೆ ಪರೀಕ್ಷೆ ನಡೆಸಿದ್ದು, ಕನ್ನಡಿಗರ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆಗೆ ಬರೆದು ಆಯ್ಕೆಯಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕಾದರೆ ಈ ಕುರಿತು ಕಾಯ್ದೆ ಜಾರಿಗೆ ತರಬೇಕಾಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ. ‘ಕನ್ನಡ ಕಾಣಿಸಿ-ಕನ್ನಡ ಕೇಳಿಸಿ’ ಸ್ಲೋಗನ್‌ನಡಿ ಕನ್ನಡ ಪಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬ್ಯಾಂಕಿನ ದಾಖಲೆ, ವಹಿವಾಟು ಪುಸ್ತಕ, ಗ್ರಾಹಕರ ಚೀಟಿಯಲ್ಲಿ ಕನ್ನಡ ಕಡ್ಡಾಯ ಇರಲೇ ಬೇಕು. ಜಿಲ್ಲಾ ಪಂಚಾಯತ್ ಸಿಇಒ ಅಧ್ಯಕ್ಷತೆಯ ಸಮಿತಿ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಅನುಷ್ಠಾನಿಸುವ ದಿಶೆಯಲ್ಲಿ ವರ್ಗಾವಣೆಗೊಂಡು ಆಗಮಿಸುವ ಕನ್ನಡೇತರ ಅಧಿಕಾರಿಗಳಿಗೆ ಆರಂಭದ ಮೂರು ತಿಂಗಳು ಕನ್ನಡ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ನಾಗಾಭರಣ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ನಾಲ್ಕು ಪ್ರಾದೇಶಿಕ ವಿಭಾಗಗಳಲ್ಲ ಕನ್ನಡ ಅನುಷ್ಠಾನ ಕುರಿತಂತೆ ವಿಚಾರ ಸಂಕಿರಣ ಹಮ್ಮಿಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಮಂಗಳೂರಿನಲ್ಲೂ ವಿಚಾರ ಸಂಕಿರಣ ನಡೆಯಲಿದೆ ಎಂದು ಪ್ರಾಧಿಕಾರ ಸದಸ್ಯ ರಮೇಶ್ ಗುಬ್ಬಿಗೂಡು ಹೇಳಿದರು.

ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹೋದರ ಭಾಷೆಗಳ ಜತೆ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಲ್ಲಿ ಕನ್ನಡ ಸ್ವಚ್ಛ ಹಾಗೂ ಶುದ್ಧವಾಗಿದೆ. ಕನ್ನಡ ಭಾಷೆಯ ನೆಲ ಕರ್ನಾಟಕದಲ್ಲೇ ಕನ್ನಡಕ್ಕೆ ಕಾವಲು ಸಮಿತಿ ರಚಿಸಬೇಕಾದ ಪ್ರಮೇಯ ಬಂದಿದೆ. ಆದರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳ ಪ್ರಾಧಿಕಾರ ಮಾತ್ರ ಇದೆ ಎಂದು ಪ್ರಾಧಿಕಾರ ಕಾರ್ಯದರ್ಶಿ ಸಂತೋಷ್ ಹಾನಗಲ್ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.,  ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿ.ಪಂ. ಸಿಇಒ ಡಾ.ಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

ಎಲ್ಲ ಕಡೆ ಕನ್ನಡ ಕೇಳಿಸಿ ಮತ್ತು ಕನ್ನಡ ಕೇಳಿಸಿ ಎನ್ನವ ಧ್ಯೇಯ ವಾಕ್ಯದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲ ಸರ್ಕಾರಿ ಟೆಂಡರ್, ವೇತನ ಚೀಟಿ ಸಹಿತ ಎಲ್ಲ ವಿಭಾಗಗಳಲ್ಲಿ ಕನ್ನಡ ಅನುಷ್ಠಾನ ಅಗತ್ಯ. ಕನ್ನಡದ ಜತೆ ಸಹೋದರ ಭಾಷೆಯಾಗಿ ತುಳುವನ್ನು ಉಳಿಸಿ ಬೆಳೆಸಲು ಸಮುದಾಯಗಳು ಮುಂದಾಗಬೇಕು. ಅದಕ್ಕಾಗಿಯೇ ತುಳು ಅಕಾಡೆಮಿ ಇದೆ. ಸರ್ಕಾರ ಕೂಡ ತುಳು ಭಾಷೆಗೆ ಉತ್ತೇಜನ ನೀಡುತ್ತಿದೆ. ಸ್ಥಳೀಯವಾಗಿ ತುಳು ಭಾಷೆಯನ್ನು ಆಡಳಿತದಲ್ಲಿ ಬಳಸಲು ಯಾವುದೇ ತೊಡಕು ಇಲ್ಲ.

- ಟಿ.ಎಸ್.ನಾಗಾಭರಣ, ಅಧ್ಯಕ್ಷರು,  ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News