×
Ad

'ಹಿಂದಿ' ಕುರಿತು ಅಮಿತ್ ಶಾ ಹೇಳಿಕೆಗೆ ಪ್ರತಿಯಾಗಿ 'ತಮಿಳು ದೇವಿ' ಬಗ್ಗೆ ಪೋಸ್ಟ್ ಶೇರ್ ಮಾಡಿದ ಎ.ಆರ್ ರೆಹಮಾನ್

Update: 2022-04-09 18:43 IST

 ಚೆನ್ನೈ: "ವಿವಿಧ ರಾಜ್ಯಗಳ ಜನರು ಹಿಂದಿ ಭಾಷೆಯಲ್ಲಿ ವ್ಯವಹರಿಸಬೇಕು, ಆಂಗ್ಲ ಭಾಷೆಯಲ್ಲಲ್ಲ'' ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ತಮಿಳುನಾಡು ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆಗೊಳಗಾಗಿರುವ ನಡುವೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಶುಕ್ರವಾರ ತಮ್ಮ ʼಪ್ರೀತಿಯ ತಮಿಳು'' ಕುರಿತಂತೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ತಮಿಳು ದೇವತೆ `ತಮಿಝನಂಗು' ಚಿತ್ರವನ್ನು ರೆಹಮಾನ್ ಶೇರ್ ಮಾಡಿದ್ದಾರೆ. ಮನೋನ್ಮಣಿಯಂ ಸುಂದರರಾಮ್ ಪಿಳೈ ಅವರು ರಚಿಸಿದ ತಮಿಳು ಥಾಯಿ ವಾಝತು ಅಥವಾ ತಮಿಳು ರಾಷ್ಟ್ರಗೀತೆಯಲ್ಲಿ ಬಳಸಲಾಗಿರವ ಈ ಪದವನ್ನು ರೆಹಮಾನ್ ಉಲ್ಲೇಖಿಸಿದ್ದಾರೆ.

ಇಪ್ಪತ್ತನೇ ಶತಮಾನದ ತಮಿಳು ಕವಿ  ಭಾರತೀದಾಸನ್ ಅವರ ತಮಿಳು ಕವನಗಳ ಸಂಕಲನ `ತಮಿಳಿಯಕ್ಕಂ' ನ ಒಂದು ಸಾಲನ್ನೂ ಉಲ್ಲೇಖಿಸಿ "ಪ್ರೀತಿಯ ತಮಿಳು ನಮ್ಮ ಅಸ್ತಿತ್ವದ ಬೇರು'' ಎಂದು ಬರೆದಿದ್ದಾರೆ. ತಮ್ಮ ಪೋಸ್ಟ್ ಅನ್ನು ಅವರು ಟ್ವಿಟ್ಟರ್, ಫೇಸ್ಬುಕ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಭಾಷೆಯ ವಿಚಾರದ ಚರ್ಚೆಯಲ್ಲಿ ರೆಹಮಾನ್ ಪ್ರತಿಕ್ರಿಯಿಸಿರುವುದು ಇದು ಮೊದಲ ಬಾರಿಯೇನಲ್ಲ. ಜೂನ್ 2019ರಲ್ಲಿ ಎಲ್ಲಾ ರಾಜ್ಯಗಳಿಗೆ ತ್ರಿಭಾಷಾ ಸೂತ್ರ ಜಾರಿಗೆ ತರುವ ಪ್ರಸ್ತಾಪವಿದ್ದಾಗ ರೆಹಮಾನ್ ಟ್ವೀಟ್ ಮಾಡಿ "ಆಟೊನೋಮಸ್(ಸ್ವಾಯತ್ತತೆ)- ಕ್ಯಾಂಬ್ರಿಡ್ಜ್ ಆಂಗ್ಲ ನಿಘಂಟಿನಲ್ಲಿ ಅರ್ಥ" ಎಂದು ಟ್ವೀಟ್ ಮಾಡಿ  ನಿಘಂಟಿನಲ್ಲಿ ಅದರ ಅರ್ಥದ ವೆಬ್ ಲಿಂಕ್  ಪೋಸ್ಟ್ ಮಾಡಿದ್ದರು. ಇದು ವಿಶ್ವದಾದ್ಯಂತ `#ಆಟೊನಾಮಸ್‍ತಮಿಳುನಾಡು'' ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಿತ್ತು.

ಹಾಗೆಯೇ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಕಡ್ಡಾಯ ಕಲಿಕೆಯನ್ನು ಕೇಂದ್ರ ಕೈಬಿಡಲು ನಿರ್ಧರಿಸಿದಾಗ ಟ್ವೀಟ್ ಮಾಡಿದ್ದ ರೆಹಮಾನ್, "ಉತ್ತಮ ನಿರ್ಧಾರ. ತಮಿಳುನಾಡಿನಲ್ಲಿ ಹಿಂದಿ ಕಡ್ಡಾಯವಲ್ಲ. ಕರಡನ್ನು ತಿದ್ದಲಾಗಿದೆ," ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News