ಎಲ್ ಪಿಜಿ ಬೆಲೆ ಏರಿಕೆ ಕುರಿತು ವಿಮಾನದಲ್ಲೇ ಸ್ಮೃತಿ ಇರಾನಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿ

Update: 2022-04-10 11:49 GMT

ಹೊಸದಿಲ್ಲಿ: ಇಂದು ದಿಲ್ಲಿ-ಗುವಾಹಟಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬಳಿ ಇಂಧನ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮಹಿಳಾ ವಿಭಾಗದ ಕಾರ್ಯಕಾರಿ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಪ್ರಶ್ನಿಸಿದಾಗ ವಿಲಕ್ಷಣ ಉತ್ತರ ನೀಡಿದ್ದಾರೆ.

ಸಚಿವೆಯೊಂದಿಗೆ ಮಾತನಾಡಿರುವ ವೀಡಿಯೊವನ್ನು ಡಿಸೋಜಾ ನಂತರ ಟ್ವೀಟ್ ಮಾಡಿದ್ದಾರೆ. ಸಚಿವೆ ಕೂಡ ತಮ್ಮ ಸೆಲ್ ಫೋನ್ ನಿಂದ ವೀಡಿಯೊ ದಾಖಲಿಸಿಕೊಂಡಿದ್ದಾರೆ.

ಸಚಿವರನ್ನು ಟ್ಯಾಗ್  ಮಾಡಿ ಟ್ವೀಟಿಸಿರುವ ಡಿಸೋಜಾ, "ಮೋದಿ ಸಂಪುಟದ ಸಚಿವೆ ಸ್ಮೃತಿ ಇರಾನಿ ಜಿ, ಗುವಾಹಟಿಗೆ ಹೋಗುವ ಮಾರ್ಗದಲ್ಲಿ ಮುಖಾಮುಖಿಯಾದರು. ಎಲ್ಪಿಜಿಯ ಅಸಹನೀಯ ಬೆಲೆಗಳ ಬಗ್ಗೆ ಕೇಳಿದಾಗ  ಅವರು ಲಸಿಕೆಗಳು, ರೇಶನ್ ಹಾಗೂ ಬಡವರನ್ನೂ ದೂಷಿಸಿದರು! ಸಾಮಾನ್ಯ ಜನರ ದುಃಖಕ್ಕೆ ಸಚಿವೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎನ್ನುವುದನ್ನು ವೀಡಿಯೊದ ಆಯ್ದ ಭಾಗದಲ್ಲಿ ನೋಡಿ!” ಎಂದು  ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದಂತೆ ಸಚಿವೆ ಸ್ಮೃತಿ  ಇರಾನಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿದೆ.

ಕಾಂಗ್ರೆಸ್ ನಾಯಕಿ ತನ್ನ "ದಾರಿಗೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಆರಂಭದಲ್ಲಿ ಇರಾನಿ ಆರೋಪಿಸಿದರು. ಅಡುಗೆ ಅನಿಲ ಕೊರತೆ ಹಾಗೂ ಗ್ಯಾಸ್ ರಹಿತ ಸ್ಟೌವ್ಗಳ ಬಗ್ಗೆ ಕೇಳಿದ ಪ್ರಶ್ನೆಗೆ, ‘ದಯವಿಟ್ಟು ಸುಳ್ಳು ಹೇಳಬೇಡಿ’ ಎಂದು ಸಚಿವೆ ಇರಾನಿ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News