ʼಜೈ ಶ್ರೀರಾಮ್‌ʼ ಘೋಷಣೆಯೊಂದಿಗೆ ರೈಲು ನಿಲ್ದಾಣದ ಗೋಡೆ ಒಡೆದು ಹಾಕಿದ ಹಿಂದುತ್ವ ಕಾರ್ಯಕರ್ತರು

Update: 2022-04-10 12:20 GMT

ಕಟ್ನಿ: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಮುಖ್ಯ ರೈಲ್ವೇ ನಿಲ್ದಾಣದ ಗೋಡೆಯನ್ನು ಹಿಂದುತ್ವ ಕಾರ್ಯಕರ್ತರು ಒಡೆದು ಹಾಕಿದ್ದಾರೆ. ʼಜೈ ಶ್ರೀ ರಾಮ್‌ʼ ಘೋಷಣೆಯೊಂದಿಗೆ ಗೋಡೆ ಒಡೆದ ಕಾರ್ಯಕರ್ತರು, ದೇವಾಲಯಕ್ಕೆ ಅಡ್ಡವಾಗಿ ಗೋಡೆ ಕಟ್ಟಲಾಗಿತ್ತು ಎಂದು ಆರೋಪಿಸಿದ್ದಾರೆ.

ಅದಾಗ್ಯೂ, ಇದೀಗ ಗೋಡೆ ಒಡೆಯಲು ಬೇಡಿಕೆ ಇಟ್ಟಿದ್ದವರ ಆಗ್ರಹಕ್ಕೆ ಮಣಿದಿರುವ ರೈಲ್ವೇ ಆಡಳಿತ ಮಂಡಳಿಯು, ದೇವಾಲಯದ ಎದುರಿರುವ ಗೋಡೆ ತೆರವಿಗೆ ಅನುಮತಿಸಿದೆ ಎಂದು news24online.com ವರದಿ ಮಾಡಿದೆ.

 ಕೆಲವು ವರ್ಷಗಳ ಹಿಂದೆ, ಮುಖ್ಯ ರೈಲು ನಿಲ್ದಾಣದ ಆವರಣದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದ ಮುಂಭಾಗದಲ್ಲಿ ರೈಲ್ವೆ ಅಧಿಕಾರಿಗಳು ಗೋಡೆ ನಿರ್ಮಿಸಿದ್ದರು. ಈ ಗೋಡೆಯ ವಿರುದ್ಧ ಹಿಂದೆ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು ಎನ್ನಲಾಗಿದೆ.

ರೈಲ್ವೇ ಅಧಿಕಾರಿಗಳು ನಿರ್ಮಿಸಿದ ಗೋಡೆಯಿಂದಾಗಿ ದೇವಸ್ಥಾನವು ಸಾರ್ವಜನಿಕರಿಗೆ ಕಾಣುತ್ತಿಲ್ಲ ಎನ್ನುವುದು ಹಿಂದುತ್ವ ಸಂಘಟನೆಗಳ ಮುಖ್ಯ ಆರೋಪವಾಗಿತ್ತು. ಹಲವು ಸಂಘಟನೆಗಳು ರೈಲ್ವೇ ಅಧಿಕಾರಿಗಳು ಕ್ರಮವನ್ನು ಖಂಡಿಸಿದ್ದವು. ಕೆಲವು ದಿನಗಳ ಹಿಂದೆಯಷ್ಟೇ, ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರೈಲ್ವೇ ಪೊಲೀಸರು ಹಾಗೂ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದಿದ್ದರು ಎಂದು ವರದಿಯಾಗಿದೆ.

 ಇದೀಗ ರಾಮನವಮಿಗೂ ಒಂದು ದಿನ ಮುಂಚಿತವಾಗಿ, ರೈಲ್ವೇ ನಿಲ್ದಾಣವನ್ನು ಸೇರಿದ ಹಿಂದುತ್ವ ಕಾರ್ಯಕರ್ತರು ʼಜೈ ಶ್ರೀ ರಾಂʼ ಘೋಷಣೆ ಕೂಗಿ, ದೊಡ್ಡ ದೊಡ್ಡ ಸುತ್ತಿಗೆಗಳೊಂದಿಗೆ ಏಕಾಏಕಿ ಗೋಡೆಯನ್ನು ಒಡೆದು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News