ಸಿಯುಇಟಿ ವಾಪಸ್ ಪಡೆಯಬೇಖೆಂದು ಆಗ್ರಹಿಸಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

Update: 2022-04-11 13:52 GMT
Photo: PTI

ಚೆನ್ನೈ: ನೀಟ್‍ನಂತಹ ಕಾಮನ್ ಯುನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್ (ಸಿಯುಇಟಿ) ದೇಶಾದ್ಯಂತದ ವಿಭಿನ್ನ ಶಾಲಾ ಶಿಕ್ಷಣ ವ್ಯವಸ್ಥೆಗಳನ್ನು ಬದಿಗೆ ಸರಿಸುತ್ತದೆ ಎಂದು ಆರೋಪಿಸಿ ತಮಿಳುನಾಡಿನ ವಿಧಾನಸಭೆ ಇಂದು ನಿರ್ಣಯವೊಂದನ್ನು ಅಂಗೀಕರಿಸಿ  ದೇಶಾದ್ಯಂತದ 45 ಕೇಂದ್ರೀಯ ವಿವಿಗಳಲ್ಲಿ  ಎಲ್ಲಾ ಪದವಿ ಶಿಕ್ಷಣ ಕೊರ್ಸುಗಳ ಪ್ರವೇಶಾತಿ ಪರೀಕ್ಷೆ ಪ್ರಸ್ತಾಪವನ್ನು ವಾಪಸ್ ಪಡೆಯಬೇಕೆಂದು  ಸರ್ವಾನುಮತದಿಂದ ಆಗ್ರಹಿಸಿದೆ.

 ಆಡಳಿತ ಡಿಎಂಕೆ, ಅದರ ಮಿತ್ರ ಪಕ್ಷಗಳಾದ ಕಾಂಗ್ರೆಸ್, ವಿಸಿಕೆ ಹೊರತಾಗಿ ವಿಪಕ್ಷ ಎಐಎಡಿಎಂಕೆ ಕೂಡ ಈ ನಿರ್ಣಯವನ್ನು ಬೆಂಬಲಿಸಿದೆ. ಆದರೆ ಬಿಜೆಪಿ ಮಾತ್ರ ನಿರ್ಣಯ ವಿರೋಧಿಸಿ ಸದನದಿಂದ ಹೊರನಡೆದಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅನುದಾನದಿಂದ ಕಾರ್ಯಾಚರಿಸುವ ಎಲ್ಲಾ ಕೇಂದ್ರೀಯ ವಿವಿಗಳ ಕೋರ್ಸುಗಳ ಪ್ರವೇಶಾತಿಗಾಗಿ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ಕಾಮನ್ ಯುನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್ ಮೂಲಕವೇ 2022-23 ಶೈಕ್ಷಣಿಕ ವರ್ಷದಿಂದ ನಡೆಸಬೇಕು ಎಂಬ ಕೇಂದ್ರದ ಘೋಷಣೆಯ ಬೆನ್ನಲ್ಲಿ ತಮಿಳುನಾಡು ವಿಧಾನಸಭೆ ಈ ನಿರ್ಣಯ ಅಂಗೀಕರಿಸಿದೆ.

ಎನ್‍ಸಿಇಆರ್‍ಟಿ ಪಠ್ಯಕ್ರಮ ಆಧಾರಿತ ಯಾವುದೇ ಪ್ರವೇಶ ಪರೀಕ್ಷೆ ವಿವಿಧ ರಾಜ್ಯ ಪಠ್ಯಕ್ರಮಗಳ ಆಧಾರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಂಡಿಸಿದ ಈ ನಿರ್ಣಯದಲ್ಲಿ ಹೇಳಲಾಗಿದೆ.

ಹೆಚ್ಚಿನ ರಾಜ್ಯಗಳಲ್ಲಿ ಶೇ 80ರಷ್ಟು ವಿದ್ಯಾರ್ಥಿಗಳು ರಾಜ್ಯ ಬೋರ್ಡ್ ಪಠ್ಯಕ್ರಮದ ಆಧಾರಿತ ಶಿಕ್ಷಣವನ್ನೇ ಪಡೆದವರಾಗಿರುವಾಗ ಇಂತಹ ಒಂದು ಪ್ರವೇಶ ಪರೀಕ್ಷೆ ಸಮಂಜಸವಾಗದು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇಂತಹ ಪರೀಕ್ಷೆ ಜಾರಿಗೆ ಬಂದರೆ ಕೇಂದ್ರೀಯ ವಿವಿಗಳಿಗೆ ಪ್ರವೇಶ ಪಡೆಯುವ ತಮಿಳುನಾಡಿನ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ ಎಂದೂ ಹೇಳಲಾಗಿದೆ.

ಇಂತಹ ಒಂದು ಪ್ರವೇಶ ಪರೀಕ್ಷೆಯನ್ನು ನಡೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಕೋರಿ ಸ್ಟಾಲಿನ್ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News