ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಹಗರಣ : ಮಾಜಿ ರಕ್ಷಣಾ ಕಾರ್ಯದರ್ಶಿ, 4 ನಿವೃತ್ತ ವಾಯು ಸೇನಾಧಿಕಾರಿಗಳಿಗೆ ಸಮನ್ಸ್

Update: 2022-04-11 13:30 GMT
Photo: PTI

ಹೊಸದಿಲ್ಲಿ: ಆಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ  ಹೆಲಿಕಾಪ್ಟರ್ ಹಗರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಪೂರಕ ಚಾರ್ಜ್‍ಶೀಟ್ ಅನ್ನು ಸೋಮವಾರ ಪರಿಗಣನೆಗೆ ತೆಗೆದುಕೊಂಡು ವಿಶೇಷ ನ್ಯಾಯಾಲಯ,  ಮಾಜಿ ರಕ್ಷಣಾ ಕಾರ್ಯದರ್ಶಿಯೊಬ್ಬರು ಹಾಗೂ ಭಾರತೀಯ ವಾಯುಸೇನೆಯ ನಾಲ್ಕು ನಿವೃತ್ತ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.

ಎಲ್ಲಾ ಆರೋಪಿಗಳು ಮುಂದಿನ ವಿಚಾರಣೆ ನಡೆಯುವ ಎಪ್ರಿಲ್ 28ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಇಟಲಿ ಮೂಲದ ಆಗಸ್ಟಾ ವೆಸ್ಟ್‌ ಲ್ಯಾಂಡ್ ಸಂಸ್ಥೆಗೆ ಲಾಭ ಗಿಟ್ಟಿಸುವ ಉದ್ದೇಶದಿಂದ ಹೆಲಿಕಾಪ್ಟರ್ ಕ್ಯಾಬಿನ್ ಹಾಗೂ ಅದು ಹಾರಬಹುದಾದ ಗರಿಷ್ಠ ಎತ್ತರ ಮುಂತಾದ ಕೆಲವೊಂದು ಮಾನದಂಡಗಳನ್ನು  ತಿರುಚಲಾಗಿತ್ತು ಎಂದು ಸಿಬಿಐ ತನ್ನ ಚಾರ್ಜ್‍ಶೀಟ್‍ನಲ್ಲಿ ಹೇಳಿದೆ.

2010ರಲ್ಲಿ ನಡೆದ ಈ ರೂ 3600 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾರ್ಚ್ 16 ರಂದು  ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿ ಕಾಂತ್ ಶರ್ಮ ಅವರನ್ನು ಹೆಸರಿಸಿತ್ತು. ಚಾರ್ಜ್ ಶೀಟ್‍ನಲ್ಲಿ ನಿವೃತ್ತ ವಾಯುಸೇನಾಧಿಕಾರಿಗಳಾದ  ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪಾನೆಸರ್, ಡೆಪ್ಯುಟಿ ಚೀಫ್ ಟೆಸ್ಟ್ ಪೈಲಟ್‍ಎಸ್ ಎ ಕುಂಟೆ, ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಮತ್ತು ಗ್ರೂಪ್ ಕ್ಯಾಫ್ಟನ್ ಎನ್ ಸಂತೋಷ್ ಅವರ ಹೆಸರುಗಳಿವೆ.

ಸಿಬಿಐ ವಿಶೇಷ ತಂಡ ಈ ಪ್ರಕರಣದ ತನಿಖೆಯನ್ನು 2016ರಲ್ಲಿ ವಹಿಸಿಕೊಂಡಿತ್ತು. ಮೊದಲ ಚಾರ್ಜ್‍ಶೀಟ್ ಅನ್ನು ಮಾಜಿ ಏರ್ ಚೀಫ್ ಮಾರ್ಷಲ್ ಎಸ್‍ಪಿ ತ್ಯಾಗಿ ಮತ್ತು 11 ಇತರರ ವಿರುದ್ಧ ಸೆಪ್ಟೆಂಬರ್ 1, 2017ರಂದು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News