ದ.ಕ. ಜಿಲ್ಲೆಯಲ್ಲಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಮಹಿಳಾ ಸಾರಥ್ಯ

Update: 2022-04-13 07:16 GMT
ಸ್ವಚ್ಛತಾ ವಾಹನದ ಜೊತೆ ಲಕ್ಷ್ಮೀ ಹಾಗೂ ಪ್ರಮೀಳಾ

ನಾನು ಕೃಷಿಕ ಕುಟುಂಬದವಳು. ಕೆಲ ವರ್ಷಗಳ ಹಿಂದೆ ಕಾರು ಚಾಲನೆ ಕಲಿತಿದ್ದೆ. ಆದರೆ ಕಾರು ಚಲಾಯಿಸುತ್ತಿರಲಿಲ್ಲ. ಚಾಲನಾ ಪರವಾನಿಗೆಯನ್ನೂ ಹೊಂದಿದ್ದೆ. ನಮ್ಮ ಗ್ರಾಪಂ ಸದಸ್ಯೆಯೊಬ್ಬರು ನಮ್ಮ ತ್ಯಾಜ್ಯ ವಾಹನಕ್ಕೆ ಚಾಲಕಿಯೊಬ್ಬರು ಬೇಕು ಎಂದು ನನ್ನಲ್ಲಿ ಕೇಳಿದ್ದರು. ನನಗೂ ನಾನು ಉದ್ಯೋಗ ಮಾಡಬೇಕೆಂಬ ಮಹದಾಸೆ ಇತ್ತು. ಪತಿಯಲ್ಲಿ ಕೇಳಿದಾಗ ಖುಷಿಯಿಂದ ಸಮ್ಮತಿಸಿದರು. ಹಾಗಾಗಿ ನಾನು ನನ್ನ ಚಾಲನಾ ಪರವಾನಿಗೆ ಹಿಡಿದು ಪಿಡಿಒ ಅವರನ್ನು ಸಂಪರ್ಕಿಸಿದೆ. ಆರಂಭದಲ್ಲಿ ಗ್ರಾಪಂನಿಂದ 9 ದಿನಗಳ ಚಾಲನಾ ತರಬೇತಿ ನೀಡಲಾಯಿತು. ಬಳಿಕ ನಾನು ಖುದ್ದು ತ್ಯಾಜ್ಯ ವಾಹನ ಚಲಾಯಿಸಲು ಆರಂಭಿಸಿದೆ. ಆರಂಭದಲ್ಲಿ ಮಣ್ಣಿನ ರಸ್ತೆಯಲ್ಲಿ ತ್ಯಾಜ್ಯ ವಾಹನ ಚಲಾಯಿಸುವುದು ಸ್ವಲ್ಪ ತ್ರಾಸದಾಯಕವಾಗಿತ್ತು. ಬರಬರುತ್ತಾ ಅಭ್ಯಾಸವಾಯಿತು. ಇದೀಗ ಸಲೀಸಾಗಿ ವಾಹನ ಚಾಲನೆ ಮಾಡಬಲ್ಲೆ.

-ಲಕ್ಷ್ಮೀ,ಸ್ವಚ್ಛತಾ ವಾಹನದ ಚಾಲಕಿ


ಮಂಗಳೂರು, ಎ.12: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲಾದ್ಯಂತ ತ್ಯಾಜ್ಯ ನಿರ್ವಹಣೆಯೇ ಆಡಳಿತಕ್ಕೆ ಸವಾಲಾಗಿದೆ. ಈ ನಡುವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವ ಹಣೆಯನ್ನು ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇದೀಗ ಸಂಗ್ರಹಣಾ ವಾಹನಗಳಲ್ಲಿಯೂ ಮಹಿಳಾ ಚಾಲಕಿಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ, ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ವಚ್ಛತಾ ವಾಹನದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಕಡೇಶಿವಾಲಯದ ಲಕ್ಷ್ಮೀ ಪಾತ್ರರಾಗಿದ್ದಾರೆ.

ದ.ಕ. ಜಿಪಂ ವ್ಯಾಪ್ತಿಯ 223 ಗ್ರಾಮ ಪಂಚಾಯತ್‌ಗಳ ಪೈಕಿ 66 ಗ್ರಾಪಂಗಳ ತ್ಯಾಜ್ಯ ನಿರ್ವಹಣೆಯ ಜವಾಬ್ಧಾರಿಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಒಕ್ಕೂಟಗಳಿಗೆ ವಹಿಸಲಾಗಿದೆ. ಗ್ರಾಮ ಪಂಚಾಯತ್ ಹಾಗೂ ಒಕ್ಕೂಟಗಳ ನಡುವೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಪಂ ಮತ್ತು ಅಲ್ಲಿನ ಮಾತೃ ಸಂಜೀವಿನಿ ಪಂಚಾಯತ್ ಮಟ್ಟದ ಒಕ್ಕೂಟದ ನಡುವಿನ ಜಿಲ್ಲೆಯ ಪ್ರಥಮ ಒಪ್ಪಂದವಾಗಿದೆ. ಇಲ್ಲಿ 66 ಗ್ರಾಪಂಗಳ ಪೈಕಿ 39 ಗ್ರಾಪಂಗಳ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ (ಸ್ವಚ್ಛ ವಾಹಿನಿಗಳು) ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರೇ ಚಾಲಕಿಯರು ಎಂಬುದು ವಿಶೇಷ. ಇವರಲ್ಲಿ ಜಿಪಂ ವ್ಯಾಪ್ತಿಯ ತ್ಯಾಜ್ಯ ವಾಹನಗಳ ಪ್ರಥಮ ಮಹಿಳಾ ಚಾಲಕಿಯಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಕಳೆದ 6 ತಿಂಗಳಿನಿಂದ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೃಷಿಕೆಯಾಗಿದ್ದ ತಾನೂ ಒಬ್ಬ ಉದ್ಯೋಗಿಯಾಗಿ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆ ಇದೆ ಅನ್ನುತ್ತಾರೆ.

ಬೆಳಗ್ಗೆ 9:30ರಿಂದ ಮಧ್ಯಾಹ್ನ 2:30ರವರೆಗೆ ತ್ಯಾಜ್ಯ ಸಂಗ್ರಹ ಣೆಯ ಕೆಲಸ. ಪಂಚಾಯತ್‌ನಿಂದ ವಾಹನ ತರಬೇತಿ ಪಡೆದ ಬಳಿಕ ಆರಂಭದಲ್ಲಿ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ತ್ಯಾಜ್ಯ ವಿಂಗಡಣೆ ಕುರಿತಾದ ಕರಪತ್ರ ಹಂಚಿ ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಯಿತು. ಬಳಿಕ ತ್ಯಾಜ್ಯ ಸಂಗ್ರಹಣೆ ಕಾರ್ಯ ಆರಂಭಿಸಲಾಯಿತು ಎಂದು ಲಕ್ಷ್ಮೀ ವಿವರಿಸುತ್ತಾರೆ.

ದಿನವೊಂದಕ್ಕೆ ಸರಾಸರಿ 20ರಿಂದ 30 ಕಿ.ಮೀ. ತ್ಯಾಜ್ಯ ವಾಹನ ಓಡಿಸುತ್ತಾರೆ ಲಕ್ಷ್ಮೀ. ತಮ್ಮ ಪಂಚಾಯತ್ ವ್ಯಾಪ್ತಿಯ ಮನೆಗಳನ್ನು ಮೂರು ವಿಂಗಡಣೆ ಮಾಡಿಕೊಂಡು ತ್ಯಾಜ್ಯ ಸಂಗ್ರಹ ಮಾಡಲಾಗುತ್ತದೆ. ಅದರಂತೆ ವಾರದಲ್ಲಿ ಎರಡು ದಿನ ಮನೆಯೊಂದರ ಕಸ ಸಂಗ್ರಹ ಮಾಡಲಾಗುತ್ತದೆ. ತನಗೆ ವಾಹನದಲ್ಲಿ ಪ್ರಮೀಳಾ ಎಂಬ ಚಾಲಕಿಯೂ ಇದೀಗ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಲಕ್ಷ್ಮೀ.

ಗ್ರಾಮದ ವಿವಿಧ ಭಾಗಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಸ್ವಚ್ಛ ಸಂರ್ಕೀಣಕ್ಕೆ ವಾಹನದಲ್ಲಿ ತರಲಾಗುತ್ತದೆ. ಅಲ್ಲಿ ಸ್ವಚ್ಛತಾ ಸೇನಾನಿ ಕಸ ವಿಂಗಡಣೆ ಮಾಡುತ್ತಾರೆ. ಕೆಲವೊಮ್ಮೆ ಅಗತ್ಯವಿದ್ದಲ್ಲಿ ಈ ಇಬ್ಬರು ಚಾಲಕಿಯರು ಕೂಡಾ ಅವರ ಜತೆ ಕೈಜೋಡಿಸುತ್ತಾರೆ. ಮನೆಗೆ ತೆರಳಿದ ಬಳಿಕ ಕೃಷಿಯಲ್ಲೂ ಪತಿ ಜತೆ ಸಹಕರಿಸುತ್ತಾರೆ ಲಕ್ಷ್ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News