ಒಡಿಶಾದಲ್ಲಿ ಸಮುದಾಯಗಳ ನಡುವೆ ಘರ್ಷಣೆ; ಇಂಟರ್‌ನೆಟ್‌ ಸೇವೆ ಸ್ಥಗಿತ

Update: 2022-04-13 15:10 GMT
Photo: twitter/Kalingatv

ಭುವನೇಶ್ವರ್:‌ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಜೋಡಾದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದ ಒಂದು ದಿನದ ನಂತರ, ಮಂಗಳವಾರ ತಡರಾತ್ರಿ ಮತ್ತೆ ತೀವ್ರವಾದ ಹಿಂಸಾಚಾರ ನಡೆದಿದೆ.

ಪೊಲೀಸರ ಪ್ರಕಾರ, ಜೋಡಾ-ಬನೇಕಲಾ ರಸ್ತೆಯಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿವೆ. ಬಳಿಕ ಆ ಪ್ರದೇಶದ ಸಹೀದ್ ನಗರ ಚಕ್‌ನಲ್ಲಿ ರಸ್ತೆ ತಡೆ ನಡೆಸಲಾಗಿದೆ, ಈ ಸಂದರ್ಭದಲ್ಲಿ ಗಲಭೆಕೋರರು ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗೆ ಸೇರಿದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದಲ್ಲಿ ಸದ್ಯ 16 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. CrPC ಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು,  ಗುರುವಾರದವರೆಗೆ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ಬಾರ್ಬಿಲ್ ಉಪವಿಭಾಗದ ಪೊಲೀಸ್ ಅಧಿಕಾರಿ ಹಿಮಾಂಶು ಬೆಹೆರಾ ತಿಳಿಸಿದ್ದಾರೆ.

ಘರ್ಷಣೆಯ ನಂತರ, ಕಿಯೋಂಜಾರ್ ಜಿಲ್ಲಾ ಪೊಲೀಸರು ಬುಧವಾರ ಸ್ಥಳೀಯವಾಗಿ ಧ್ವಜ ಮೆರವಣಿಗೆ ನಡೆಸಿದ್ದಾರೆ.  ಮಂಗಳವಾರ, ಜಿಲ್ಲಾ ಪೊಲೀಸರು ಎರಡು ಸಮುದಾಯಗಳ ನಡುವೆ ಶಾಂತಿ ಮಧ್ಯಸ್ಥಿಕೆಗೆ ಕರೆ ನೀಡಿದ್ದರು ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಸಭೆಗೆ ಬಂದಿದ್ದರು.

ಸೋಮವಾರ ಮಧ್ಯಾಹ್ನ, ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ರಾಮನವಮಿ ಧ್ವಜ ಸ್ಥಾಪಿಸಿದ ಬಳಿಕ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News