ಈಶಾನ್ಯದ ಶಾಲೆಗಳಲ್ಲಿ ಹಿಂದಿ ಕಡ್ಡಾಯ ಕ್ರಮವು ಅಸಾಮರಸ್ಯ ಸೃಷ್ಟಿಸುತ್ತದೆ: ವಿದ್ಯಾರ್ಥಿ ಸಂಘಗಳು

Update: 2022-04-13 17:42 GMT
Photo: PTI

ಕೊಹಿಮಾ,ಎ.13: ಈಶಾನ್ಯ ರಾಜ್ಯಗಳಲ್ಲಿ 10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯ ವಿಷಯವನ್ನಾಗಿಸುವ ಕೇಂದ್ರದ ನಿರ್ಧಾರಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿರುವ ಎಂಟು ವಿದ್ಯಾರ್ಥಿ ಸಂಘಗಳ ಒಕ್ಕೂಟವಾಗಿರುವ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್ಇಎಸ್ಒ)ಯು,ಈ ಕ್ರಮವು ಸ್ಥಳೀಯ ಭಾಷೆಗಳಿಗೆ ಹಾನಿಕಾರಕವಾಗುತ್ತದೆ ಮತ್ತು ಅಸಾಮರಸ್ಯವನ್ನು ಸೃಷ್ಟಿಸುತ್ತದೆ ಎಂದು ಪ್ರತಿಪಾದಿಸಿದೆ.

ಗೃಹಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ ‘ಪ್ರತಿಕೂಲ ನೀತಿ’ಯನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿರುವ ಎನ್ಇಎಸ್ಒ,ತಮ್ಮ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಕಡ್ಡಾಯಗೊಳಿಸಬೇಕು ಮತ್ತು ಹಿಂದಿ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿಸಬೇಕು ಎಂದು ಸೂಚಿಸಿದೆ.

ಭಾರತದಲ್ಲಿ ಶೇ.40ರಿಂದ ಶೇ.43ರಷ್ಟು ಜನರು ಹಿಂದಿ ಭಾಷಿಕರಾಗಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ ತಮ್ಮ ಸ್ವಂತ ದೃಷ್ಟಿಕೋನದಲ್ಲಿ ಶ್ರೀಮಂತ,ಅಭಿವೃದ್ಧಿ ಹೊಂದುತ್ತಿರುವ ಮತ್ತು ಜ್ವಲಂತವಾಗಿರುವ,ಭಾರತವು ವೈವಿಧ್ಯಪೂರ್ಣ ಮತ್ತು ಬಹುಭಾಷಾ ರಾಷ್ಟ್ರವಾಗಿದೆ ಎಂಬ ಅನನ್ಯತೆಯನ್ನು ನೀಡುತ್ತಿರುವ ಇತರ ಸ್ಥಳೀಯ ಭಾಷೆಗಳು ದೇಶದಲ್ಲಿ ಹೇರಳವಾಗಿವೆ. ಈಶಾನ್ಯ ಭಾರತದಲ್ಲಿ ಪ್ರತಿಯೊಂದೂ ರಾಜ್ಯವು ವಿವಿಧ ಜನಾಂಗೀಯ ಗುಂಪುಗಳು ಮಾತನಾಡುತ್ತಿರುವ ತನ್ನದೇ ಆದ ವಿಶಿಷ್ಟ ಮತ್ತು ವೈವಿಧ್ಯಮಯ ಭಾಷೆಗಳನ್ನು ಹೊಂದಿದೆ ಎಂದು ಎನ್ಇಎಸ್ಒ ತಿಳಿಸಿದೆ.

ಪ್ರದೇಶದಲ್ಲಿ ಹಿಂದಿ ಭಾಷೆಯ ಕಡ್ಡಾಯ ಹೇರಿಕೆಯು ಸ್ಥಳೀಯ ಭಾಷೆಗಳ ಪ್ರಚಾರ ಮತ್ತು ಪ್ರಸರಣಕ್ಕೆ ಹಾನಿಯನ್ನುಂಟು ಮಾಡುವುದಷ್ಟೇ ಅಲ್ಲ,ಈಗಾಗಲೇ ತಮ್ಮ ಬೃಹತ್ ಪಠ್ಯಕ್ರಮಕ್ಕೆ ಅನಿವಾರ್ಯವಾಗಿ ಇನ್ನೊಂದು ಕಡ್ಡಾಯ ವಿಷಯವನ್ನು ಸೇರಿಸಬೇಕಾಗುವ ವಿದ್ಯಾರ್ಥಿಗಳಿಗೂ ಹಾನಿಯುಂಟಾಗುತ್ತದೆ. ಇಂತಹ ಕ್ರಮವು ಏಕತೆಯನ್ನು ತರುವುದಿಲ್ಲ,ಅದು ಆತಂಕಗಳು ಮತ್ತು ಅಸಾಮರಸ್ಯವನ್ನುಂಟು ಮಾಡುವ ಸಾಧನವಾಗುತ್ತದೆ. ಎನ್ಇಎಸ್ಒ ಈ ನೀತಿಯನ್ನು ಬಲವಾಗಿ ವಿರೋಧಿಸುತ್ತದೆ ಮತ್ತು ತನ್ನ ಪ್ರತಿಭಟನೆಯನ್ನು ಮುಂದುವರಿಸುತ್ತದೆ ಎಂದು ಅದು ಪತ್ರದಲ್ಲಿ ತಿಳಿಸಿದೆ.
ಕೇಂದ್ರವು ಇದರ ಬದಲು ಈಶಾನ್ಯ ಪ್ರದೇಶದಲ್ಲಿಯ ಸ್ಥಳೀಯ ಭಾಷೆಗಳ ಇನ್ನಷ್ಟು ಏಳಿಗೆಗೆ ಗಮನ ಹರಿಸಬೇಕು ಎಂದೂ ಎನ್ಎಸ್ಇಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News