ಸತತ ನಾಲ್ಕನೇ ವರ್ಷ ದೇಶದಲ್ಲಿ ವಾಡಿಕೆ ಮಳೆ ನಿರೀಕ್ಷೆ

Update: 2022-04-15 01:59 GMT

ಹೊಸದಿಲ್ಲಿ: ದೇಶದ ಕೃಷಿ ವಲಯಕ್ಕೆ ಧನಾತ್ಮಕ ಸಂದೇಶ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಸತತ ನಾಲ್ಕನೇ ವರ್ಷ ವಾಡಿಕೆ ಮಳೆಯನ್ನು ನಿರೀಕ್ಷಿಸಿದೆ. ದೇಶಾದ್ಯಂತ ಜೂನ್- ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಸಮಾನವಾಗಿ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ದೇಶದಲ್ಲಿ ನೈರುತ್ಯ ಮುಂಗಾರು, ಶೇಕಡ 5ರಷ್ಟು ವ್ಯತ್ಯಯಕ್ಕೆ ಒಳಪಟ್ಟು ಧೀರ್ಘಾವಧಿ ಸರಾಸರಿಯ ಶೇಕಡ 99ರಷ್ಟಾಗಲಿದೆ. ವಾಯವ್ಯ ಮತ್ತು ಈಶಾನ್ಯ ಭಾರತದಲ್ಲಿ ಹಾಗೂ ದಕ್ಷಿಣ ಮತ್ತು ದಕ್ಷಿಣ ಪರ್ಯಾಯಭೂಮಿ ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ. ಆದರೆ ಇದು ಕೃಷಿ ಚಟುವಟಿಕೆಗಳಿಗೆ ಧಕ್ಕೆ ತರುವ ಸಾಧ್ಯತೆ ಇಲ್ಲ ಹಾಗೂ ಮಳೆಯಾಶ್ರಿತ ಪ್ರದೇಶಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಅಂದಾಜು ಇದೆ ಎಂದು ಸ್ಪಷ್ಟಪಡಿಸಿದೆ.

ಧೀರ್ಘಾವಧಿ ಸರಾಸರಿಯಂತೆ 1971-2020ರ ಅವಧಿಯಲ್ಲಿ ವಾಡಿಕೆ ಮಳೆ 87 ಸೆಂಟಿಮೀಟರ್. ಧೀರ್ಘಾವಧಿ ಸರಾಸರಿಯ ಶೇಕಡ 96ರಿಂದ 104ರಷ್ಟು ಪ್ರಮಾಣದಲ್ಲಿ ಮಳೆ ಬಿದ್ದರೆ ಇದನ್ನು ವಾಡಿಕೆ ಮಳೆ ಎಂದು ಪರಿಗಣಿಸಲಾಗುತ್ತದೆ.

ಪ್ರಸಕ್ತ ವರ್ಷ ಸಾಮಾನ್ಯ ಮಳೆ ಬೀಳುವ ಸಂಭವನೀಯತೆ ಶೇಕಡ 40ರಷ್ಟಿದ್ದರೆ, ಸಾಮಾನ್ಯಕ್ಕಿಂತ ಅಧಿಕ ಹಾಗೂ ಭಾರಿ ಮಳೆಯಾಗುವ ಸಂಭವನೀಯತೆ ಕ್ರಮವಾಗಿ ಶೇಕಡ 15 ಹಾಗೂ 5ರಷ್ಟಿದೆ ಎಂದು ಅಂದಾಜಿಸಿದೆ. ಅಂದರೆ ವಾಡಿಕೆಯಷ್ಟು ಅಥವಾ ಅಧಿಕ ಮಳೆಯಾಗುವ ಸಂಭವನೀಯತೆ ಶೇಕಡ 60ರಷ್ಟಿದೆ.

ಅಂತೆಯೇ ಹವಾಮಾನ ಇಲಾಖೆ ಗುರುವಾರ 1971-2020 ಅಂಕಿ ಅಂಶಗಳ ಆಧಾರದಲ್ಲಿ ವಾಡಿಕೆ ಮಳೆಯಲ್ಲಿ ಅಲ್ಪ ಇಳಿಕೆಯನ್ನು ಸೂಚಿಸುವ ಹೊಸ ಮಾನದಂಡವನ್ನು ಕೂಡಾ ಪ್ರಕಟಿಸಿದೆ. ಹೊಸ ವಾಡಿಕೆ ಮಳೆ 88 ಸೆಂಟಿಮೀಟರ್ ಆಗಿರುತ್ತದೆ. 1951-2000ರ ಅವಧಿಯ ಅಂಕಿ ಅಂಶಗಳನ್ನು ಆಧರಿಸಿ ಇದು 89 ಸೆಂಟಿಮೀಟರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News