ಈ ನಗರದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟಿಸಿ ಕೇವಲ 1 ರೂಪಾಯಿಗೆ ಪೆಟ್ರೋಲ್ ಮಾರಾಟ!

Update: 2022-04-15 05:15 GMT

ಪುಣೆ: ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಪ್ರತಿಭಟಿಸಲು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ  ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿ ಸ್ಥಳೀಯ ಸಂಸ್ಥೆಯೊಂದು ಗುರುವಾರ 500 ಜನರಿಗೆ ಲೀಟರ್‌ಗೆ ಕೇವಲ 1 ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡಿದೆ.

ಪ್ರತಿ ಖರೀದಿದಾರರಿಗೆ ಕೇವಲ ಒಂದು ಲೀಟರ್ ಇಂಧನವನ್ನು ನೀಡಲಾಯಿತು. ಆದರೂ, ಜನರು ಪೆಟ್ರೋಲ್ ಪಂಪ್‌ಗೆ ಜಮಾಯಿಸಿದ್ದರಿಂದ  ಎಲ್ಲರನ್ನು  ಸರತಿ ಸಾಲಿನಲ್ಲಿ ನಿಲ್ಲಿಸಲಾಯಿತು. ಗುಂಪನ್ನು ನಿಯಂತ್ರಿಸಲು ಪೊಲೀಸರನ್ನೂ ನಿಯೋಜಿಸಲಾಗಿತ್ತು.

ಅಂಬೇಡ್ಕರ್ ವಿದ್ಯಾರ್ಥಿಗಳು ಹಾಗೂ  ಯುವ ಪ್ಯಾಂಥರ್ಸ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

"ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದೆ.  ನರೇಂದ್ರ ಮೋದಿ ನೇತೃತ್ವದ  ಸರಕಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ  ರೂ. 120 ತಲುಪಿದೆ.  ಆದ್ದರಿಂದ ಜನರಿಗೆ ಬೆಲೆ ಏರಿಕೆಯ ಬೇಗೆಯಿಂದ ಶಮನ  ನೀಡಲು ಹಾಗೂ  ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲು ನಾವು ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ'' ಎಂದು  ಸಂಘಟನೆಯ ರಾಜ್ಯ ಘಟಕದ ಮುಖಂಡ ಮಹೇಶ ಸರ್ವಗೌಡ ಹೇಳಿದ್ದಾರೆ.

"ನಮ್ಮಂತಹ ಸಣ್ಣ ಸಂಸ್ಥೆ 500 ಜನರಿಗೆ ಒಂದು ರೂಪಾಯಿಯಲ್ಲಿ ಪೆಟ್ರೋಲ್  ನೀಡಿದೆ, ಸರಕಾರವೂ ಹೀಗೆಯೇ ಮಾಡಬೇಕು'' ಎಂದು ಅವರು ಒತ್ತಾಯಿಸಿದರು.

“ಇಷ್ಟು ಕಡಿಮೆ ಬೆಲೆಗೆ ಪೆಟ್ರೋಲ್ ಖರೀದಿಸಿದ್ದು ನನಗೆ ಖುಷಿ ತಂದಿದೆ. ಪ್ರತಿ ದಿನವೂ ಹೊಸ ಎತ್ತರಕ್ಕೆ ಏರುತ್ತಿರುವ ಹಣದುಬ್ಬರದ ಮಧ್ಯೆ ನಾನು ಸ್ವಲ್ಪ ಹಣವನ್ನು ಉಳಿಸಿದ್ದೇನೆ" ಎಂದು ಖರೀದಿದಾರರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News