ದ್ವೇಷ, ಧರ್ಮಾಂಧತೆ, ಅಸಹಿಷ್ಣುತೆ ಇಡೀ ದೇಶವನ್ನು ಆವರಿಸುತ್ತಿದೆ: ಸೋನಿಯಾ ಕಳವಳ

Update: 2022-04-16 17:44 GMT
Photo: PTI

ಹೊಸದಿಲ್ಲಿ,ಎ.16: ದ್ವೇಷ, ಧರ್ಮಾಂಧತೆ ಹಾಗೂ ಅಸಹಿಷ್ಣುತೆಯು ಇಡೀ ದೇಶವನ್ನು ಆವರಿಸಿಕೊಳ್ಳುತ್ತಿದ್ದು, ಅದನ್ನು ತಡೆಯದೇ ಇದ್ದಲ್ಲಿ ಸಮಾಜಕ್ಕೆ ಸರಿಪಡಿಸಲಾಗದಷ್ಟು ಮಟ್ಟಿಗೆ ಹಾನಿಗೀಡು ಮಾಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕೆರಳಿದ ಬೆಂಕಿಯನ್ನು ಹಾಗೂ ದ್ವೇಷದ ಸುನಾಮಿಯನ್ನು ತಡೆಗಟ್ಟೋಣ. ಇಲ್ಲದೆ ಇದ್ದಲ್ಲಿ ನಮ್ಮ ಹಿಂದಿನ ತಲೆಮಾರುಗಳು ಕಷ್ಟಪಟ್ಟು ನಿರ್ಮಿಸಿರುವುದೆಲ್ಲವೂ ಆಹುತಿಯಾಗಲಿದೆ. ಇದಕ್ಕೆ ದೇಶದ ಜನತೆ ಅವಕಾಶ ನೀಡಬಾರದು ಎಂದು ಸೋನಿಯಾಗಾಂಧಿ ಅವರು ದಿನಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ತಿಳಿಸಿದ್ದಾರೆ.

ಶತಮಾನಕ್ಕೂ ಅಧಿಕ ಸಮಯದಿಂದ ಭಾರತೀಯ ರಾಷ್ಟ್ರವಾದವು ಈ ಜಗತ್ತಿಗೆ ಗೀತಾಂಜಲಿಯೆಂಬ ಅಮರ ಕೃತಿಯನ್ನು ನೀಡಿದೆ. ಬಹುಶಃ ಆದರಲ್ಲಿರುವ 35ನೇ ಕವನವು ಅತ್ಯಂತ ಆದರಣೀಯವಾಗಿದೆ ಹಾಗೂ ವ್ಯಾಪಕವಾಗಿ ಉಲ್ಲೇಖಿಸಲ್ಪಟ್ಟಿದೆ. ‘ವೇರ್ ದಿ ಮೈಂಡ್ ಇಸ್ ವಿದೌಟ್ ಫಿಯರ್, ವೇರ್ ದಿ ಹೆಡ್ ಇಸ್ ಹೆಲ್ಡ್ ಹೈ’ (ಎಲ್ಲಿ ಮನ ಕಳುಕಿರದೋ ಎಲ್ಲ ತಲೆಬಾಗಿರದೋ) ಕವನವು ಇಂದಿಗೂ ಅತ್ಯಂತ ಪ್ರಸಕ್ತವಾಗಿದೆ ಎಂದು ಸೋನಿಯಾ ‘ಎ ವೈರಸ್ ರೇಜಸ್’ (ವೈರಸೊಂದು ತಾಂಡವವಾಡುತ್ತಿದೆ) ಲೇಖನದಲ್ಲಿ ತಿಳಿಸಿದ್ದಾರೆ.

 ‘‘ಭಾರತವು ಶಾಶ್ವತವಾಗಿ ಕೋಮುಧ್ರುವೀಕರಣಗೊಂಡ ಸ್ಥಿತಿಯಲ್ಲಿರಬೇಕೇ? ಎಂದು ಪ್ರಶ್ನಿಸಿರುವ ಸೋನಿಯಾ ಅವರು ಆಡಳಿತಾರೂಢ ವ್ಯವಸ್ಥೆಯು ದೇಶದ ಪೌರರು ಇಂತಹ ಪರಿಸರದಲ್ಲಿ ನಂಬಿಕೆ ಇರಿಸಿಕೊಳ್ಳಬೇಕೆಂಬುದನ್ನು ಬಯಸಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

‘ಆಹಾರ, ಉಡುಗೆ, ಧರ್ಮ, ಉತ್ಸವಗಳು ಅಥವಾ ಭಾಷೆ ಹೀಗೆ ಬೇರೆ ಬೇರೆ ವಿಷಯಗಳಲ್ಲಿ ಭಾರತೀಯರನ್ನು ಪರಸ್ಪರ ಎತ್ತಿಕಟ್ಟಲಾಗುತ್ತಿದೆ. ಕಲಹಪ್ರಿಯ ಶಕ್ತಿಗಳಿಗೆ ಬಹಿರಂಗವಾಗಿ ಇಲ್ಲವೇ ಗುಪ್ತವಾಗಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಪೂರ್ವಾಗ್ರಹಪೀಡಿತ ಸೇಡು ಹಾಗೂ ವೈರತ್ವಕ್ಕೆ ಉತ್ತೇಜನ ನೀಡಲು ಪುರಾತನ ಹಾಗೂ ಸಮಕಾಲೀನ ಇತಿಹಾಸವನ್ನು ನಿರಂತರವಾಗಿ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ.ʼ

  ಹಿಜಾಬ್ ವಿವಾದ, ರಾಮನವಮಿ ಉತ್ಸವದ ಸಂದರ್ಭದಲ್ಲಿ ವಿವಿಧೆಡೆ ಭುಗಿಲೆದ್ದ ಹಿಂಸಾಚಾರ ಹಾಗೂ ರಾಮನವಮಿಯಂದು ಮಾಂಸಾಹಾರ ನೀಡಲಾದ ಹಿನ್ನೆಲೆಯಲ್ಲಿ ದಿಲ್ಲಿಯ ಜೆಎನ್ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ಘರ್ಷಣೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲೇ ಸೋನಿಯಾ ಈ ಲೇಖನ ಬರೆದಿರುವುದು ಹೆಚ್ಚಿನ ಮಹತ್ವ ಪಡೆದಿದೆ.

 ಹೆಚ್ಚುತ್ತಿರುವ ದ್ವೇಷ, ಮಚ್ಚುಮರೆಯಿಲ್ಲದೆ ಆಕ್ರಮಣಕಾರಿತ್ವಕ್ಕೆ ಪ್ರಚೋದನೆ ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಅಪರಾಧಗಳಿಂದಾಗಿ, ಎಲ್ಲರಿಗೂ ಅವಕಾಶ ನೀಡುವ ಹಾಗೂ ಸಮ್ಮಿಳಿತಗೊಳಿಸುವಂತಹ ನಮ್ಮ ಸಮಾಜದ ಪರಂಪರೆಯಿಂದ ದೂರಸರಿಯಲಾಗಿದೆಯೆಂದು ಸೋನಿಯಾ ಲೇಖನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News