ಚುನಾವಣೆ ಗೆಲ್ಲಲು ಧರ್ಮ ಕಲಹ ಬಿತ್ತುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ: ಸಂಜಯ್ ರಾವತ್ ಆರೋಪ

Update: 2022-04-17 06:45 GMT

ಮುಂಬೈ: ಶ್ರೀರಾಮನ ಹೆಸರಿನಲ್ಲಿ ಕೋಮು ಬೆಂಕಿ ಹಚ್ಚುವುದು “ಶ್ರೀರಾಮನ ವಿಚಾರಧಾರೆ’’ಗೆ ಮಾಡಿದ ಅವಮಾನ ಎಂದು ಹೇಳಿರುವ ಶಿವಸೇನೆ ನಾಯಕ ಸಂಜಯ್ ರಾವತ್, ರಾಮ ನವಮಿಯ  ವೇಳೆ ನಡೆದ ಘರ್ಷಣೆಗಳು ಕರ್ಫ್ಯೂ ಹೇರಲು ಕಾರಣವಾಗಿರುವ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಭಗವಾನ್ ರಾಮನೂ ಕೂಡ ಚಂಚಲವಾಗಿದ್ದಾನೆ ಎಂದು ರವಿವಾರ ಹೇಳಿದ್ದಾರೆ.

ಚುನಾವಣೆ ಗೆಲ್ಲಲು ಧರ್ಮ ಕಲಹವನ್ನು ಬಿತ್ತುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

 "ಯಾರಾದರೂ ಮೂಲಭೂತವಾದದ ಬೆಂಕಿಯನ್ನು ಹೊತ್ತಿಸಲು ಹಾಗೂ  ಚುನಾವಣೆಯಲ್ಲಿ ಗೆಲ್ಲಲು ಶಾಂತಿಯನ್ನು ಕದಡಲು ಬಯಸಿದರೆ ಅವರು ವಿಭಜನೆಯ ಎರಡನೇ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಅರ್ಥ  ಎನ್ನುವುದಾಗಿ ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ "ರೋಖ್‌ಥೋಕ್" ನಲ್ಲಿ ರಾವತ್ ಬರೆದಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್ ಸಾಮ್ನಾ ಪತ್ರಿಕೆಯ ಕಾರ್ಯಕಾರಿ ಸಂಪಾದಕರಾಗಿದ್ದಾರೆ.

ಎಪ್ರಿಲ್ 10 ರಂದು ರಾಮ ನವಮಿಯಂದು ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಕೋಮು ಘರ್ಷಣೆಗಳನ್ನು ಉಲ್ಲೇಖಿಸಿದ ರಾವತ್, ಇದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದರು.

ಹಿಂದೂ ಮತ್ತು ಮರಾಠಿ ಹೊಸ ವರ್ಷವನ್ನು ಗುರುತಿಸುವ ಎಪ್ರಿಲ್ 2 ರಂದು ಗುಡಿ ಪಾಡ್ವಾದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ಮೆರವಣಿಗೆಗಳನ್ನು ನಡೆಸಲಾಯಿತು.  ಆದರೆ ಈ ಮೆರವಣಿಗೆಗಳು ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಹಾದುಹೋದ ನಂತರವೂ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ರಾವತ್ ಹೇಳಿದರು.

" ರಾಮನವಮಿಯಂದು ಎಲ್ಲಾ ಹಿಂಸಾಚಾರಗಳು ಏಕೆ ನಡೆಯಬೇಕು? ಪ್ರಧಾನಿ ಮೋದಿ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರುತ್ತಾರೆ ಎಂದು ಯಾರಾದರೂ ನಂಬಬಹುದೇ?" ಎಂದು ಅವರು ಸಬರಕಾಂತದಲ್ಲಿನ ಹಿಂಸಾಚಾರವನ್ನು ಉಲ್ಲೇಖಿಸಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News