ಮೊದಲ ದಿನದ ಗಳಿಕೆ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಕೇವಲ ಈ ಎರಡು ಬಾಲಿವುಡ್ ಚಿತ್ರಗಳು

Update: 2022-04-17 07:24 GMT
ಕೆಜಿಎಫ್‌ ಚಾಪ್ಟರ್-2 ಪೋಸ್ಟರ್ (Twitter)

ಮುಂಬೈ: ಪ್ಯಾನ್‌-ಇಂಡಿಯಾ ಚಲನಚಿತ್ರಗಳು ಭಾರತೀಯ ಸಿನೆಮಾ ರಂಗದ ಚಿತ್ರಣವನ್ನೇ ಬದಲಾಯಿಸಿವೆ. ಬಾಲಿವುಡ್‌ ಸಿನೆಮಾಗಳನ್ನು ಮೀರಿ ದಕ್ಷಿಣ ಭಾರತದ ಸಿನೆಮಾಗಳು ಯಶಸ್ಸನ್ನು ಪಡೆಯುತ್ತಿವೆ . ಜನಪ್ರಿಯತೆ ಇರಲಿ, ಬಾಕ್ಸ್‌ ಆಫೀಸ್‌ ಗಳಿಕೆ ಇರಲಿ ದಕ್ಷಿಣ ಭಾರತದ ಸಿನೆಮಾಗಳು ತಮ್ಮ ಛಾಪನ್ನು ಮೂಡಿಸುತ್ತಿವೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಕೆಜಿಎಫ್‌ ಚಾಪ್ಟರ್-2 ಹಾಗೂ ತಮಿಳಿನ ಬೀಸ್ಟ್‌ ಚಿತ್ರ, ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನೆಮಾಗಳ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ .

ಯಶ್‌ ಅಭಿನಯದ ಬಹುನಿರೀಕ್ಷಿತ KGF 2 ಚಿತ್ರವು ಬಿಡುಗಡೆಗೊಂಡ ಮೊದಲ ದಿನವೇ ರೂ 116 ಕೋಟಿಗಳನ್ನು ಬಾಚಿಕೊಂಡಿದೆ.  ಆದರೂ, ರಾಜಮೌಳಿ ನಿರ್ದೇಶನದ ಎರಡು ಚಿತ್ರಗಳೇ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನೆಮಾಗಳ ಟಾಪ್‌-10 ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಭದ್ರಪಡಿಸಿಕೊಂಡಿದೆ.  ಆರ್‌ಆರ್‌ಆರ್‌ ಚಿತ್ರ ಬಿಡುಗಡೆಯಾದ ಮೊದಲ ದಿನ 134 ಕೋಟಿ ಬಾಚಿಕೊಂಡಿದ್ದರೆ, ಬಾಹುಬಲಿ-2: ದಿ ಕಂಕ್ಲೂಷನ್‌ 121 ಕೋಟಿ ಬಾಚಿಕೊಂಡಿದ್ದು, ಇವೆರಡು ಸಿನೆಮಾಗಳೇ ಮೊದಲ ಎರಡು ಸ್ಥಾನದಲ್ಲಿ ಇವೆ.

ಈ ವಾರದಲ್ಲಿ ಬಿಡುಗಡೆಗೊಂಡ ದಳಪತಿ ವಿಜಯ್‌ ಅವರ ಬೀಸ್ಟ್‌ ಚಿತ್ರವೂ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು 49.30 ಕೋಟಿಗಳನ್ನು ಗಳಿಸಿಕೊಂಡು 9 ನೇ ಸ್ಥಾನ ಪಡೆದಿದೆ. ಈ ವಾರ ರಿಲೀಸ್‌ ಆದ ಕೆಜಿಎಫ್‌ ಮತ್ತು ಬೀಸ್ಟ್‌ ಸಿನೆಮಾದಿಂದಾಗಿ ಅಲ್ಲು ಅರ್ಜುನ್‌ ಅವರ ಪ್ರಚಂಡ ಹಿಟ್ ಚಿತ್ರ  ಪುಷ್ಪ ಹಾಗೂ ಶಾರುಖ್‌ ಖಾನ್‌ ಅಭಿನಯದ ಹ್ಯಾಪಿ ನ್ಯೂ ಇಯರ್‌ ಚಿತ್ರ ಟಾಪ್-10 ಪಟ್ಟಿಯಿಂದ ಹೊರಕ್ಕೆ ತಳ್ಳಲ್ಪಟ್ಟಿವೆ .

ಕುತೂಹಲವೆಂದರೆ, ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಟಾಪ್-10 ಭಾರತೀಯ ಸಿನೆಮಾಗಳಲ್ಲಿ  ಬಾಲಿವುಡ್‌ ನ ಎರಡು ಚಿತ್ರಗಳು ಮಾತ್ರ ಇವೆ. ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌ ಸೇರಿದಂತೆ ಬಹುತಾರಾಗಣದ ʼಥಗ್ಸ್‌ ಆಫ್‌ ಹಿಂದೂಸ್ತಾನ್‌ʼ ಮತ್ತು ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ʼವಾರ್‌ʼ ಸಿನೆಮಾ ಮಾತ್ರ ಈ ಪಟ್ಟಿಯಲ್ಲಿರುವ ಎರಡು ಬಾಲಿವುಡ್‌ ಸಿನೆಮಾಗಳು. ಈ ಪಟ್ಟಿಯಲ್ಲಿ ಪ್ರಭಾಸ್‌ ಅಭಿನಯದ ಮೂರು ಸಿನೆಮಾಗಳು ಸ್ಥಾನ ಪಡೆದುಕೊಂಡಿದೆ.
 
ಸಂಪೂರ್ಣ ಪಟ್ಟಿ ಇಲ್ಲಿದೆ.

►ಆರ್‌ಆರ್‌ಆರ್‌  – 134 ಕೋಟಿ
►ಬಾಹುಬಲಿ 2 - 121 ಕೋಟಿ
►KGF ಚಾಪ್ಟರ್‌ 2 – 116 ಕೋಟಿ
►ಸಾಹೋ – 88 ಕೋಟಿ
►2.0 – 63 ಕೋಟಿ
►ವಾರ್ – 53.35 ಕೋಟಿ
►ಸೈ ರಾ ನರಸಿಂಹ ರೆಡ್ಡಿ – 52.50 ಕೋಟಿ
►ಥಗ್ಸ್‌ ಆಫ್‌ ಹಿಂದೂಸ್ತಾನ್ – 52.25 ಕೋಟಿ
►ಬೀಸ್ಟ್ – 49.30 ಕೋಟಿ
►ರಾಧೆ ಶ್ಯಾಮ್ – 46 ಕೋಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News