ಕೆಜಿಎಫ್-2 ಸಿನಿಮಾ ಎಡಿಟ್ ಮಾಡಿದ್ದು 19ರ ಹರೆಯದ ಉಜ್ವಲ್ ಕುಲಕರ್ಣಿ: ಇಷ್ಟು ದೊಡ್ಡ ಜವಾಬ್ದಾರಿ‌ ಸಿಗಲು ಕಾರಣವೇನು?

Update: 2022-04-17 10:45 GMT
photo: instagram/editorujwalk

ಬೆಂಗಳೂರು: ಎರಡು ದಿನಗಳ ಹಿಂದೆ ಬಿಡುಗಡೆಯಾದ ಕೆಜಿಎಫ್ ಸರಣಿಯ ಎರಡನೇ ಭಾಗವಾದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ.  ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿರು ಈ ಚಿತ್ರ ಮೊದಲ ದಿನವೇ 116 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಯಶ್ ಅಭಿನಯದ ಚಿತ್ರದ ಪ್ರತಿಯೊಂದು ಸಣ್ಣ ವಿವರಗಳು ಕೂಡಾ ಸಾಮಾನ್ಯ ಜನರಲ್ಲಿ ಆಸಕ್ತಿಯನ್ನುಂಟು ಮಾಡುತ್ತಿವೆ. ಆದರೆ, ಈ ಚಿತ್ರದ ಎಡಿಟರ್‌ ಕೇವಲ 19 ವಯಸ್ಸಿನ ಹುಡುಗ ಎನ್ನುವುದು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ.

ಇಷ್ಟು ದೊಡ್ಡ ಯಶಸ್ಸು ಕಂಡ, ದೊಡ್ಡ ಬಜೆಟ್‌ ಚಿತ್ರದ ಎಡಿಟರ್‌ ಒಬ್ಬ ಹದಿಹರೆಯದ ಹುಡುಗ ಎಂದರೆ ಯಾರೂ ಆಶ್ಚರ್ಯಚಕಿರಾಗಬಹುದು. ಆದರೆ, ಹೌದು. ಕೆಜಿಎಫ್-2‌ ಚಿತ್ರವನ್ನು ಎಡಿಟ್‌ ಮಾಡಿರುವುದು 19 ರ ಹರೆಯದ ಉಜ್ವಲ್‌ ಕುಲಕರ್ಣಿ. ವಿಶೇಷ ಎಂದರೆ, ಇದಕ್ಕೂ ಮೊದಲು ಒಂದು ಪೂರ್ಣ ಪ್ರಮಾಣದ ಚಿತ್ರವನ್ನು ಇವರು ಎಡಿಟ್‌ ಮಾಡಿಯೇ ಇರಲಿಲ್ಲ. ಇವರ ಆರಂಭವೇ ದೈತ್ಯ ಸಿನೆಮಾದೊಂದಿಗೆ ಆಗಿರೋದರಿಂದ ಇವರ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು.

 ಪ್ರಶಾಂತ್‌ ನೀಲ್‌ ಅವರು ಉಜ್ವಲ್‌ ಗೆ ಎಡಿಟಿಂಗ್‌ ಜವಾಬ್ದಾರಿ ವಹಿಸಿದ್ದೇ ಒಂದು ಕೌತುಕ. ಪ್ರಶಾಂತ್ ನೀಲ್ ಅವರು ಯೂಟ್ಯೂಬ್‌ನಲ್ಲಿ ಕಿರುಚಿತ್ರಗಳು ಮತ್ತು ಅಭಿಮಾನಿ-ನಿರ್ಮಿತ (Fan-made) ವಿಡಿಯೋಗಳನ್ನು ಎಡಿಟ್‌ ಮಾಡಿರುವ ಶೈಲಿಯನ್ನು ಮೆಚ್ಚಿ ಅನನುಭವಿ ಎಡಿಟರ್‌ಗೆ ಈ ಮೆಗಾ-ಬಜೆಟ್ ಚಲನಚಿತ್ರವನ್ನು ಎಡಿಟ್‌ ಮಾಡುವ ಜವಾಬ್ದಾರಿಯನ್ನು ವಹಿಸಿದ್ದರು.ಇಂತಹ ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳ ನಂತರ ಅಷ್ಟು ಎಳೆಯ ವಯಸ್ಸಿನಲ್ಲಿ ಅಂತಹ ದೊಡ್ಡ ಬ್ರೇಕ್ ಅನ್ನು ಪಡೆದುಕೊಳ್ಳುವುದು ನಿಜಕ್ಕೂ ಶ್ಲಾಘನೀಯ. ಪ್ರಶಾಂತ್ ಅವರು ಇಡೀ ಚಿತ್ರವನ್ನು ಚಿತ್ರೀಕರಿಸಿದ ನಂತರ, ಚಿತ್ರೀಕರಿಸಿದ ದೃಶ್ಯಗಳಿಂದ ಉಜ್ವಲ್ ಅವರು ಚಿತ್ರದ ಟ್ರೈಲರ್ ಅನ್ನು ತಯಾರಿಸಿದರು ಮತ್ತು ಅದನ್ನು ಪ್ರಶಾಂತ್ ಅವರಿಗೆ ತೋರಿಸಿದರು. ಟ್ರೇಲರ್‌ನಿಂದ ಪ್ರಭಾವಿತರಾದ ಪ್ರಶಾಂತ್ ಅವರು ಇಡೀ ಚಿತ್ರವನ್ನು ಉಜ್ವಲ್ ಎಡಿಟ್ ಮಾಡಲು ಬಿಡಲು ನಿರ್ಧರಿಸಿದರು.

‌ ಚಿತ್ರದ ಬಿಡುಗಡೆಯ ನಂತರ, ಎಡಿಟಿಂಗ್‌ ಒಳಗೊಂಡಿರುವ ತಾಂತ್ರಿಕತೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಹಾಗೂ ಎಡಿಟರ್‌ಗೆ ಕೇವಲ 19 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿರುವುದು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯಶ್ ಜೊತೆಗೆ, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ಕೂಡ ಈ ಚಿತ್ರದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News