ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ ಅಪರಾಧ ಪ್ರಕರಣವೆಂದು ಬಿಂಬಿಸಲು ಹೊರಟ ಬಿಜೆಪಿ ನಾಯಕನ ಬಂಧನ !

Update: 2022-04-18 09:54 GMT
Photo: Thenewsminute.com

ಚೆನ್ನೈ: ತನ್ನ ಕಾರಿಗೆ ತಾನೇ ಸ್ವತಃ ಬೆಂಕಿ ಹಚ್ಚಿ ನಂತರ ಇದನ್ನೊಂದು ಅಪರಾಧ ಪ್ರಕರಣವೆಂದು ಬಿಂಬಿಸಲು ಯತ್ನಿಸಿದ ತಮಿಳುನಾಡಿನ ತಿರುವಲ್ಲೂರು ಪಶ್ಚಿಮ ಬಿಜೆಪಿ ಘಟಕದ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಎಪ್ರಿಲ್ 14ರಂದು ಸತೀಶ್ ಅವರ ಚೆನ್ನೈನ ಮದುರವೊಯೊಲ್ ಪ್ರದೇಶದಲ್ಲಿರುವ ಸತೀಶ್ ನಿವಾಸದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರು  ಹೊತ್ತಿ ಉರಿದಿತ್ತು.  ಈ ಕುರಿತಂತೆ ಸತೀಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಸೀಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.

ಅದರಲ್ಲಿ ಬಿಳಿ ಶರ್ಟ್  ಧರಿಸಿದ್ದ ವ್ಯಕ್ತಿಯೊಬ್ಬ ರಸ್ತೆ ಬದಿಯಿಂದ ಕಾರಿನ ಹತ್ತಿರ ಆಗಮಿಸಿ ಕಾರಿನ ಎಲ್ಲಾ ಕಿಟಿಕಿಗಳನ್ನು ಇಣುಕಿ ನೋಡಿ ನಂತರ ತನ್ನ ಸೈಕಲ್‍ನಲ್ಲಿ ಅಲ್ಲಿಂದ ತೆರಳಿದ್ದ. ಸ್ವಲ್ಪ ಹೊತ್ತಿನ ನಂತರ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಆಗಮಿಸಿ ಕಾರಿನ ಸುತ್ತ ಏನನ್ನೋ ಸಿಂಪಡಿಸಿ ನಂತರ ಅದಕ್ಕೆ ಬೆಂಕಿ ಹಚ್ಚಿದ್ದ. ಕಾರು ಹೊತ್ತಿ ಉರಿಯುತ್ತಿದ್ದಂತೆಯೇ ಆತ ಅಲ್ಲಿಂದ ಪರಾರಿಯಾಗಿದ್ದ.

ಕಾರು ಹೊತ್ತಿ ಉರಿದಿದ್ದನ್ನು ಕಂಡ ಸ್ಥಳೀಯರು ಬಿಜೆಪಿ ನಾಯಕನ ಕುಟುಂಬ ಸದಸ್ಯರಿಗೆ ತಿಳಿಸಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರಿನತ್ತ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು.

ಆದರೆ ಸೀಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ ಸತೀಶ್ ಕುಮಾರ್ ಅವರನ್ನೇ ಹೋಲುತ್ತಿರುವುದು ಅರಿವಿಗೆ ಬಂದಿತ್ತು. ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಆತ ಒಪ್ಪಿದ್ದರು.

ತನ್ನ ಪತಿ ಚಿನ್ನಾಭರಣ ಖರೀದಿಸುವಂತೆ ಪೀಡಿಸುತ್ತಿದ್ದಳು, ಆದರೆ ಅಷ್ಟು ಹಣ ತನ್ನಲ್ಲಿರಲಿಲ್ಲ ಕೊನೆಗೆ ಪತ್ನಿ ಕಾರು ಮಾರಿ ಚಿನ್ನಾಭರಣ ಖರೀದಿಸುವಂತೆ ಹೇಳಿದ್ದಳು ಎಂದು ಆತ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಕಾರನ್ನು ಮಾರುವ ಬದಲು ಅದಕ್ಕೆ ಬೆಂಕಿ ಹಚ್ಚಿ ವಿಮಾ ಮೊತ್ತ ಪಡೆದು ಪತ್ನಿಗೆ ಚಿನ್ನಾಭರಣ ಕೊಡಿಸಬಹುದೆಂದು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಸದ್ಯ ಬಿಜೆಪಿ ನಾಯಕ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News