ದಿಲ್ಲಿ ಗಲಭೆ ಬಗ್ಗೆ ಪ್ರಧಾನಿ ಮೋದಿಯನ್ನು ಕಟುವಾಗಿ ಪ್ರಶ್ನಿಸಿದ ಅಂತರಾಷ್ಟ್ರೀಯ ಟೆನಿಸ್‌ ತಾರೆ ಮಾರ್ಟಿನಾ ನವ್ರಾಟಿಲೋವ

Update: 2022-04-18 13:17 GMT
Photo: twitter/Martina

ಹೊಸದಿಲ್ಲಿ: ಜಹಾಂಗೀರಪುರಿಯಲ್ಲಿ ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ವಿಶ್ವದೆಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರುತ್ತಿವೆ.  ಇದೀಗ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿಯೊಬ್ಬರೂ ಈ ಹಿಂಸಾಚಾರದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದನಿಯೆತ್ತಿದ್ದಾರೆ.

18 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಗೆದ್ದಿರುವ ಮಾರ್ಟಿನಾ ನವ್ರಾಟಿಲೋವ ಅವರು ಜಹಾಂಗೀರ್ಪುರಿ ಹಿಂಸಾಚಾರದ ಕುರಿತು ಟ್ವೀಟ್ ಮಾಡಿದ್ದು, ನೇರವಾಗಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಿದ್ದಾರೆ.

ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿರುವ  ಮಾರ್ಟಿನಾ ಲ್ಲಿ "ಖಂಡಿತವಾಗಿಯೂ ಇದು ಸ್ವೀಕಾರಾರ್ಹವಲ್ಲ, ಸರಿನಾ.. ಮೋದಿ?" ಎಂದು ಪ್ರಶ್ನಿಸಿದ್ದಾರೆ.

ಹನುಮ ಜಯಂತಿ ಮೆರವಣಿಗೆಯಲ್ಲಿ ಕೇಸರೀ ಧಾರಿ ಗುಂಪು ಶಸ್ತ್ರಾಸ್ತ್ರಗಳನ್ನು ಬೀಸುತ್ತಿರುವ ವೀಡಿಯೊವನ್ನು ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದರು.‌ ಈ ಟ್ವೀಟನ್ನು ಮಾರ್ಟಿನಾ ಮರು ಟ್ವೀಟ್‌ ಮಾಡಿದ್ದಾರೆ.

ಮಾರ್ಟೀನಾ ಟ್ವೀಟ್‌ ಗೆ ಟ್ವಿಟರ್‌ ನಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. 

ಮಹೇಂದ್ರ ಷಾ ಎಂಬ ಟ್ವಿಟರ್‌ ಬಳಕೆದಾರರು ಟ್ವೀಟ್ ಮಾಡಿದ್ದು,  "ಮಾರ್ಟಿನಾ ಇಂಡಿಯಾದ ವ್ಯವಹಾರಗಳಲ್ಲಿ ಆಸಕ್ತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಭಾರತೀಯ ಮತ್ತು ಟೆನಿಸ್‌ನ ದೊಡ್ಡ ಅಭಿಮಾನಿ. ಭಾರತವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾದ ಕೋಮುಗಲಭೆ ಸಂಭವಿಸುತ್ತದೆ. ಸಮುದಾಯವು ಇದರ ಬಗ್ಗೆ ಚಿಂತಿಸಬೇಕಾಗಿದೆ, ಮಾತನಾಡಬೇಕಾಗಿದೆ. ಮತ್ತೊಮ್ಮೆ ಧನ್ಯವಾದಗಳು." ಎಂದು ಬರೆದಿದ್ದಾರೆ.

  ಅಭಿಷೇಕ್ ಬೋಸ್ ಎಂಬವರು ಟ್ವೀಟ್‌ ಮಾಡಿದ್ದು, "ದುರದೃಷ್ಟವಶಾತ್ ಶಿಕ್ಷಣದ ಕೊರತೆಯಿಂದಾಗಿ ಇದೆಲ್ಲವೂ ನಡೆಯುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರು ಇದನ್ನು ಅನೇಕ ಸಂದರ್ಭಗಳಲ್ಲಿ ಮಾಡುತ್ತಾರೆ. ರಾಣಾ ಅಯ್ಯುಬ್ ನಿಮಗೆ ಒಂದು ಕಡೆಯ ಚಿತ್ರಣವನ್ನು ತೋರಿಸುತ್ತಾರೆ ಮತ್ತು ಅರ್ನಾಬ್ ಗೋಸ್ವಾಮಿ ನಿಮಗೆ ಇನ್ನೊಂದು ಕಡೆಯದನ್ನು ತೋರಿಸುತ್ತಾರೆ. ಸಮಸ್ಯೆ ಇದು. ಇಬ್ಬರೂ ಇನ್ನೊಂದು ಬದಿಯ ಬಗ್ಗೆ ನಿಮಗೆ ಹೇಳುವುದಿಲ್ಲ. ಇದೆಲ್ಲವೂ ರಾಜಕೀಯ." ಎಂದು ಬರೆದಿದ್ದಾರೆ.

ಮಾರ್ಟಿನಾ ಭಾರತದ ವಿಚಾರದಲ್ಲಿ ಟ್ವೀಟ್ ಮಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಅವರು ಟ್ವೀಟ್ ಮಾಡಿ ಬಲಪಂಥೀಯರ ಟ್ರೋಲ್‌ಗೆ ಒಳಗಾಗಿದ್ದರು.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಅವರು ʼಇದು ನನ್ನ ಮುಂದಿನ ಜೋಕ್' ಎಂದು ಬರೆದಿದ್ದರು.  ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಲ್ಲ, ದೇಶ ಕಂಡ ಅತ್ಯಂತ ಪ್ರಜಾಸತ್ತಾತ್ಮಕ ನಾಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದನ್ನು ಹಿಂದೂಸ್ತಾನ್‌ ಟೈಮ್ಸ್‌ ಟ್ವೀಟ್‌ ಮಾಡಿತ್ತು.

ಮಾರ್ಟಿನಾ ನವ್ರಾಟಿಲೋವಾ ಯಾರು?

ಜೆಕೊಸ್ಲೊವಾಕಿಯಾದಲ್ಲಿ ಜನಿಸಿದ ಮಾರ್ಟಿನಾ 1974 ರಲ್ಲಿ ಅಮೆರಿಕಕ್ಕೆ ವಲಸೆ ಬಂದರು. ಇಲ್ಲಿಂದ ಅವರ ವೃತ್ತಿಪರ ಟೆನಿಸ್ ವೃತ್ತಿಜೀವನ ಪ್ರಾರಂಭವಾಯಿತು.

18 ನೇ ವಯಸ್ಸಿನಲ್ಲಿ, ಅವರು 1975 ರ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್‌ನ ರನ್ನರ್ ಅಪ್ ಆಗಿದ್ದರು. 1978 ರಲ್ಲಿ, ಅವರು ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು, ಇದು ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯಾಗಿದೆ.

18 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಪೂರ್ಣಗೊಳಿಸಿದ ಮಾರ್ಟಿನಾ ಅವರ ಟೆನಿಸ್ ಪಯಣ ಇಲ್ಲಿಂದ ಪ್ರಾರಂಭವಾಯಿತು. ಇದಲ್ಲದೆ, ಅವರು 31 ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನು ಮತ್ತು 10 ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅವರು ವಿಂಬಲ್ಡನ್ ಸಿಂಗಲ್ಸ್ ಫೈನಲ್ ಅನ್ನು 12 ಬಾರಿ ತಲುಪಿದರು, 1982 ಮತ್ತು 1990 ರ ನಡುವೆ ಅವರು ಸತತ 9 ಬಾರಿ ವಿಂಬಲ್ಡನ್ ಫೈನಲ್ ತಲುಪಿದರು.

ಮಾರ್ಟಿನಾ ಸಿಂಗಲ್ಸ್‌ನಲ್ಲಿ 332 ವಾರಗಳವರೆಗೆ ಮತ್ತು ಡಬಲ್ಸ್‌ನಲ್ಲಿ 237 ವಾರಗಳವರೆಗೆ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನು ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News