ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಇಳೆಯರಾಜ ಹೇಳಿದ್ದೇನು?

Update: 2022-04-19 02:23 GMT

ಚೆನ್ನೈ: ಖ್ಯಾತ ಸಂಗೀತ ಸಂಯೋಜಕ ಇಳೆಯರಾಜ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿರುವುದು ಮತ್ತು ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಜತೆ ಹೋಲಿಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಇಳೆಯರಾಜ ಹೇಳಿಕೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಸಂಗೀತ ಮಾಂತ್ರಿಕನ ಹೇಳಿಕೆಯ ವಿರುದ್ಧ ವಾದವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಹೊರ ತರಲಿರುವ "ಅಂಬೇಡ್ಕರ್ & ಮೋದಿ, ರಿಫಾರ್ಮರ್ಸ್ ಐಡಿಯಾಸ್, ಪರ್ಫಾರ್ಮರ್ಸ್ ಇಂಪ್ಲಿಮೆಂಟೇಷನ್" ಎಂಬ ಕೃತಿಗೆ ಮುನ್ನುಡಿ ಬರೆದಿರುವ ಇಳೆಯರಾಜ, ಈ ಹೋಲಿಕೆ ಮಾಡಿದ್ದು, ಮಹಿಳಾ ಪರ ಯೋಜನೆ, "ಬೇಟಿ ಬಚಾವೊ ಬೇಟಿ ಪಡಾವೊ"ದಂಥ ಯೋಜನೆಗಳನ್ನು ಶ್ಲಾಘಿಸಿದ್ದಾರೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರದಿಂದ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಇಳೆಯರಾಜ ಇದಕ್ಕೆ ತಾತ್ವಿಕ ಉಪಸಂಹಾರ ನೀಡಬಹುದಿತ್ತು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಮೋದಿಯವರನ್ನು ಅಂಬೇಡ್ಕರ್ ಜತೆ ಎಂದಿಗೂ ಹೋಲಿಸುವಂತಿಲ್ಲ. ಏಕೆಂದರೆ ಮೋದಿ ಹಿಂದುತ್ವದ ಬಗ್ಗೆ ಬದ್ಧತೆ ಹೊಂದಿದ್ದರೆ, ಅಂಬೇಡ್ಕರ್ ತಮ್ಮ ಇಡೀ ಜೀವನವನ್ನು ದಮನಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿದರು ಎನ್ನುವ ವಾದ ಕೇಳಿ ಬಂದಿದೆ. ಆದರೆ ಮೋದಿ ಬೆಂಬಲಿಗರು ಇಳೆಯರಾಜ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಡಪಕ್ಷಗಳು ಮತ್ತು ತಮಿಳು ಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಇಳೆಯರಾಜ ಹೇಳಿಕೆಯನ್ನು ಖಂಡಿಸಿವೆ. ಮೋದಿ ಬಗೆಗಿನ ಇಳೆಯರಾಜ ಹೇಳಿಕೆ ಬಗ್ಗೆ ತಮ್ಮ ಪಕ್ಷದ ಯಾವ ಸದಸ್ಯರೂ ಪ್ರತಿಕ್ರಿಯಿಸುವುದಿಲ್ಲ ಎಂದು ಆಡಳಿತಾರೂಢ ಡಿಎಂಕೆ ಸ್ಪಷ್ಟಪಡಿಸಿದೆ.

ತಮಿಳುನಾಡಿಗೆ ಸಂಬಂಧಿಸಿದಂತೆ ಇಳೆಯರಾಜ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಿದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬರೆದಿರುವ ಪತ್ರವನ್ನು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಬಿಡುಗಡೆ ಮಾಡಿದ್ದಾರೆ. "ತಮಿಳುನಾಡಿನಲ್ಲಿ ಆಡಳಿತ ಪಕ್ಷದ ಜತೆ ಗುರುತಿಸಿಕೊಂಡಿರುವ ಶಕ್ತಿಗಳು ಟೀಕಾ ಪ್ರಹಾರ, ಚೀರಾಟ ಮತ್ತು ದೇಶದ ಅತ್ಯುನ್ನತ ಸಂಗೀತ ದಿಗ್ಗಜರೊಬ್ಬರನ್ನು ಅವಮಾನಿಸಲು ಹೊರಟಿವೆ. ಏಕೆಂದರೆ ಅವರ ಅಭಿಪ್ರಾಯಗಳನ್ನು ಒಂದು ರಾಜಕೀಯ ಪಕ್ಷ ಮತ್ತು ಅವರ ಮಿತ್ರ ಪಕ್ಷಗಳಿಗೆ ರುಚಿಸುತ್ತಿಲ್ಲ" ಎಂದು ನಡ್ಡಾ ಬರೆದಿದ್ದಾರೆ.

"ಇದು ಪ್ರಜಾಪ್ರಭುತ್ವವೇ? ಒಬ್ಬರ ಅಭಿಪ್ರಾಯಗಳು ಭಿನ್ನವಾಗಿರಬಹುದು ಮತ್ತು ಆದಾಗ್ಯೂ ಸಂತೋಷದಿಂದ ಸಹಬಾಳ್ವೆ ನಡೆಸಬಹುದು. ಆದರೆ ಏಕೆ ಅವಮಾನಿಸಬೇಕು" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News