ಯುದ್ಧಗ್ರಸ್ಥ ​​ಉಕ್ರೇನ್ ನಲ್ಲಿ ರಿಪಬ್ಲಿಕ್ ವರದಿಗಾರ್ತಿಯಿಂದ ಕುಣಿದಾಡುತ್ತಾ ವರದಿಗಾರಿಕೆ

Update: 2022-04-19 09:49 GMT
Photo: Twitter

ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣವು ಅಲ್ಲಿ ಭಾರೀ ಸಾವುನೋವು, ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿ ಮನುಕುಲದ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಇಂತಹ ಒಂದು ಗಂಭೀರ ಸ್ಥಿತಿಯಲ್ಲಿರುವ ದೇಶದಲ್ಲಿ ಯುದ್ಧದ ಕುರಿತು ವರದಿಗಾರಿಕೆಗೆಂದು ತೆರಳಿದ್ದ ರಿಪಬ್ಲಿಕ್ ಭಾರತ್ ವಾಹಿನಿಯ ವರದಿಗಾರ್ತಿಯೊಬ್ಬರು ಗಂಭೀರವಾದ ಯುದ್ಧ ವಿಚಾರದ ವರದಿಗಾರಿಕೆ ಮಾಡುವಾಗ ಅಕ್ಷರಶಃ ಕುಣಿದಾಡಿದ್ದು ಸಾಮಾಜಿಕ ಜಾಲತಾಣಿಗರಿಂದ ವ್ಯಾಪಕ ಟೀಕೆ ಹಾಗೂ ಕೆಲ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಉಕ್ರೇನ್‍ನಲ್ಲಿ ವರದಿಗಾರಿಕೆಗೆ ರಿಪಬ್ಲಿಕ್ ವಾಹಿನಿ ಕಳುಹಿಸಿದ್ದ ಯುವ ವರದಿಗಾರ್ತಿ ಶಾಝಿಯಾ ನಿಸಾರ್ ವರದಿಯೊಂದನ್ನು ಮಾಡುವಾಗ ಆಕೆಯ ಹಾವಭಾವ ಆಕೆ ನೃತ್ಯ ಮಾಡಿದಂತಿತ್ತು.

ಅದಕ್ಕೆ ಸಾಮಾಜಿಕ ಜಾಲತಾಣಿಗರು ಪ್ರತಿಕ್ರಿಯಿಸಿದ್ದು ಹೀಗೆ- "ನೀವೊಬ್ಬ ಹುಟ್ಟು ರ್ಯಾಪರ್ ಆಗಿದ್ದರೆ ಹಾಗೂ ಜೀವನ ನಿಮ್ಮನ್ನೊಬ್ಬ ಯುದ್ಧ ವರದಿಗಾರ್ತಿಯನ್ನಾಗಿಸಿದಾಗ,'' ಎಂದು ವಿಕ್ರಾಂತ್ ಎಂಬವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

"ಒಂದು ಕ್ಷಣ ಆಕೆ ಈ ಭಾಗದಲ್ಲಿ ಜನಪ್ರಿಯವಾಗಿರುವ ರಾಜ್ ಕಪೂರ್ ಅವರ ಮೇರಾ ನಾಮ್ ಜೋಕರ್ ಅನುಕರಣೆ ಮಾಡುತ್ತಿದ್ದಾರೆಂದು ನಾನು ಅಂದುಕೊಂಡೆ,'' ಎಂದು ರಾಹುಲ್ ಪಂಡಿತಾ ಟ್ವೀಟ್ ಮಾಡಿದ್ದರೆ, "ಇದು ಯುದ್ಧ ವರದಿಗಾರಿಕೆ ನಡೆಯುತ್ತಿದೆಯೇ ಅಥವಾ ಬಾದ್‍ಶಾಹ್ ಅವರ ರ್ಯಾಪ್ ಹಾಡು ಶೂಟಿಂಗ್ ನಡೆಯುತ್ತಿದೆಯೇ ಎಂದು ಯಾರಾದರೂ ಹೇಳಬಲ್ಲಿರಾ?,'' ಎಂದು ದಿಲಾವರ್ ಹೊಸೈನ್ ಎಂಬವರು ಪ್ರತಿಕ್ರಿಯಿಸಿದ್ದಾರೆ.

"ಈಕೆ ನೃತ್ಯ ಏಕೆ ಮಾಡುತ್ತಿದ್ದಾಳೆ?'' ಎಂದು ಒಬ್ಬ ಟ್ವಿಟರಿಗರು ಪ್ರತಿಕ್ರಿಯಿಸಿದರೆ ಇನ್ನೊಬ್ಬರು "ಎಲ್ಲರೂ ಕ್ಯಾಮೆರಾಮೆನ್ ಕುರಿತು ಯೋಚಿಸಿ, ಇದು ಸುಲಭದ ಕೆಲಸವಲ್ಲ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News