ರಾಜಸ್ಥಾನ: ಅಂಬೇಡ್ಕರ್‌ ಜಯಂತಿ ಆಚರಿಸುತ್ತಿದ್ದವರ ಮೇಲೆ ದಾಳಿ; ಭಯದಿಂದ ಗ್ರಾಮ ತೊರೆದ ದಲಿತ ಕುಟುಂಬಗಳು

Update: 2022-04-20 17:32 GMT
ಸಾಂದರ್ಭಿಕ ಚಿತ್ರ

ಜೈಪುರ: ಎಪ್ರಿಲ್‌ 14, ಅಂಬೇಡ್ಕರ್‌ ಜಯಂತಿ ಆಚರಣೆ ವೇಳೆ ಗುಜ್ಜಾರ್‌ ಸಮುದಾಯದಿಂದ ಆಕ್ರಮಣಕ್ಕೊಳಗಾದ ದಲಿತ ಕುಟುಂಬಗಳು ಪ್ರತೀಕಾರಕ್ಕೆ ಬೆದರಿ ಗ್ರಾಮದಿಂದ ಜಿಲ್ಲಾಧಿಕಾರಿ ಕಛೇರಿಗೆ ಮಂಗಳವಾರದಂದು ವಲಸೆ ಹೋಗಿದೆ ಎಂದು indianexpress.com ವರದಿ ಮಾಡಿದೆ.

ಅದಾಗ್ಯೂ, ಸ್ಥಳೀಯ ಜಿಲ್ಲಾಡಳಿತ ಇದನ್ನು ಸಾಂಕೇತಿಕ ಪ್ರತಿಭಟನೆ ಎಂದು ಬಣ್ಣಿಸಿದ್ದು, ದಲಿತ ಕುಟುಂಬಗಳು ವಲಸೆ ಹೋಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ದಲಿತ ಹಕ್ಕುಗಳ ಹೋರಾಟಗಾರರ ಪ್ರಕಾರ, ಗುಜ್ಜರ್‌ ಸಮುದಾಯದ ಜನರು ತಮ್ಮ ಮೇಲೆ ಮತ್ತೆ ದಾಳಿ ಮಾಡಬಹುದೆಂಬ ಭಯದಲ್ಲಿ ಈ ಕುಟುಂಬಗಳು ಜಿಲ್ಲಾಧಿಕಾರಿ ಕಛೇರಿಗೆ ಓಡಿ ಬಂದಿದೆ ಎಂದು ಹೇಳಿದ್ದಾರೆ. ಕೊನೆಗೆ, ಪೊಲೀಸರು ಹಾಗೂ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಅಲ್ಲೇ ತಂಗಿ ಬಂದೋಬಸ್ತ್‌ ಏರ್ಪಡಿಸಿದ ಬಳಿಕವಷ್ಟೇ ಆ ಕುಟುಂಬಗಳು ಗ್ರಾಮಕ್ಕೆ ಮರಳಿವೆ ಎಂದು ವರದಿ ಹೇಳಿದೆ.

ಗ್ರಾಮದಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಿ, ಸುರಕ್ಷತೆಯನ್ನು ಖಾತರಿಪಡಿಸಿದ ಬಳಿಕ ದಲಿತ ಕುಟುಂಬಗಳು ಗ್ರಾಮಕ್ಕೆ ಮರಳಿರುವುದನ್ನು ಭರತ್‌ಪುರ್‌ ಜಿಲ್ಲಾಧಿಕಾರಿ ಅಲೋಕ್‌ ರಂಜನ್‌ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಗೆ ಕುಟುಂಬಗಳು ಗ್ರಾಮ ತೊರೆದು ಬಂದ ಬಳಿಕ, ಅಧಿಕಾರಿಗಳು, ಪೊಲೀಸ್‌ ವರಿಷ್ಟಾಧಿಕಾರಿಗಳು ಗ್ರಾಮಕ್ಕೆ ತೆರಳಿದ್ದು, ಅಲ್ಲೇ ತಂಗಿ, ದಲಿತ ಸಮುದಾಯದ ಮದುವೆ ಒಂದು ನಡೆಯುವವರೆಗೆ ಭದ್ರತೆ ಒದಗಿಸಿದ್ದಾರೆ.

“ಸುಮಾರು 50-60 ಕ್ಕೂ ಹೆಚ್ಚು ದಲಿತ ಕುಟುಂಬಗಳು ತಮ್ಮ ಮಕ್ಕಳು, ವಸ್ತುಗಳು ಮತ್ತು ಸಾಕುಪ್ರಾಣಿಗಳೊಂದಿಗೆ ಕುಮ್ಹೆರ್‌ನ ಸೆಹ್ ಗ್ರಾಮವನ್ನು ತೊರೆದಿದ್ದಾರೆ. ಗುಜ್ಜರ್ ಸಮುದಾಯದ ಪ್ರತೀಕಾರದ ಭಯದಿಂದ ಅವರು ಗ್ರಾಮವನ್ನು ತೊರೆದಿದ್ದರು. ಏಪ್ರಿಲ್ 14 ರಂದು ಗ್ರಾಮದಲ್ಲಿ ದಲಿತರು ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದಾಗ ಗುಜ್ಜರ್ ಸಮುದಾಯದ ಸದಸ್ಯರು ಕಲ್ಲು ತೂರಾಟ ನಡೆಸಿದ್ದರು, ಅದರ ನಂತರ ಗುಜ್ಜರ್ ಸಮುದಾಯದವರು ದಲಿತ ಸಮುದಾಯದ 29 ಜನರನ್ನು ಹೆಸರಿಸಿ ಅವರ ಮೇಲೆ ಕೌಂಟರ್ ಎಫ್‌ಐಆರ್ ದಾಖಲಿಸಿದ್ದು, ಅದರ ನಂತರವೇ ಅವರು (ದಲಿತ ಕುಟುಂಬಗಳು) ಗ್ರಾಮದಿಂದ ಓಡಿಹೋದರು, ”ಎಂದು ದಲಿತ ಹಕ್ಕುಗಳ ಕೇಂದ್ರದ ಲಾಲಾರಾಮ್ ಭದಾನ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಯನ್ನು ತಲುಪಿದ ಸಂತ್ರಸ್ತರಿಗೆ ನಂತರ ಜಿಲ್ಲಾಡಳಿತ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಿದೆ.

ಏಪ್ರಿಲ್ 14 ರಂದು ಕುಮ್ಹೇರ್ ಪೊಲೀಸ್ ಠಾಣೆಯಲ್ಲಿ ದಲಿತ ಸಮುದಾಯದ ಸದಸ್ಯರು ದಾಖಲಿಸಿದ ಎಫ್‌ಐಆರ್ ಪ್ರಕಾರ, ಗುಜ್ಜರ್ ಸಮುದಾಯದವರು ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದ ಪೆಂಡಾಲಿಗೆ ಬೆಂಕಿ ಹಚ್ಚಿ, ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೂ ದಲಿತರ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂದು ಎಫ್‌ಐಆರ್‌ ಹೇಳಿದೆ.

''ಗ್ರಾಮಸ್ಥರು ಮಂಗಳವಾರ ಸಾಂಕೇತಿಕ ಪ್ರತಿಭಟನೆಯಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಗ್ರಾಮದಿಂದ ದಲಿತ ಕುಟುಂಬಗಳು ವಲಸೆ ಹೋಗಿಲ್ಲ. ಇಂದು ನಿಗದಿಯಾಗಿದ್ದ ದಲಿತ ಸಮುದಾಯದವರ ಮದುವೆಯೇ ಪ್ರತಿಭಟನಾಕಾರರ ತಕ್ಷಣದ ಕಾಳಜಿಯಾಗಿತ್ತು. ಪ್ರತಿಭಟನಾಕಾರರು ದಲಿತ ಸಮುದಾಯದ 29 ಜನರ ವಿರುದ್ಧ ಗುಜ್ಜರ್ ಸಮುದಾಯದವರು ದಾಖಲಿಸಿರುವ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು. ನಾವು ಅವರನ್ನು ಹಿಂತಿರುಗುವಂತೆ ಮನವೊಲಿಸಿದೆವು ಮತ್ತು ನಾನು, ಎಸ್‌ಪಿ ಜೊತೆಗೆ ಮುಂಜಾನೆಯವರೆಗೂ ಹಳ್ಳಿಯಲ್ಲಿಯೇ ಇದ್ದು ಮದುವೆ ಸುಗಮವಾಗಿ ನಡೆಯುವಂತೆ ನೋಡಿಕೊಂಡೆವು” ಎಂದು ರಂಜನ್ ಬುಧವಾರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News