×
Ad

ಮೊರಾದಾಬಾದ್: ಅಂತರ್ಧರ್ಮೀಯ ಮದುವೆಗೆ ಹಿಂದು ಯುವವಾಹಿನಿ ತಡೆ

Update: 2022-04-20 23:43 IST

ಮೀರತ್,ಎ.20: ಹಿಂದು ಯುವವಾಹಿನಿ (ಎಚ್‌ವೈವಿ) ಕಾರ್ಯಕರ್ತರು ಸೋಮವಾರ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಮೊರಾದಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ಭಿನ್ನ ಧರ್ಮಗಳ ಜೋಡಿಯನ್ನು ತಡೆದು ಪೊಲೀಸರಿಗೊಪ್ಪಿಸಿದ್ದು, ಯುವಕನ ವಿರುದ್ಧ ಮಂಗಳವಾರ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೊತೆಗೆ ಲುಧಿಯಾನಾದಿಂದ ಯುವತಿಯನ್ನು ಅಪಹರಿಸಿದ್ದ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ.

‘ಐಪಿಸಿ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಕಾಯ್ದೆ,2021ರಡಿ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ತನ್ನ ಕುಟುಂಬದೊಂದಿಗೆ ವಾಸವಿರಲು ಯುವಕನಿಗೆ ಅವಕಾಶ ನೀಡಿದ್ದು,ಯುವತಿಯನ್ನು ಲುಧಿಯಾನಾದಲ್ಲಿಯ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ನಮ್ಮ ವಿಚಾರಣೆ ಪೂರ್ಣಗೊಂಡ ನಂತರ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ’ಎಂದು ಪ್ರಕರಣ ದಾಖಲಾಗಿರುವ ಮೊರಾದಾಬಾದ್ ಸಿವಿಲ್ ಲೈನ್ಸ್‌ನ ಡಿಎಸ್ಪಿ ಸಾಗರ ಜೈನ್ ತಿಳಿಸಿದರು.

ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಹೊರಗೆ ಯುವಕನ್ನು ಅಟಕಾಯಿಸಿದ್ದ ಎಚ್‌ವೈವಿ ಕಾರ್ಯಕರ್ತರ ಗುಂಪು ಲವ್ ಜಿಹಾದ್ ಅನ್ನು ಆರೋಪಿಸಿತ್ತು. ಜೈ ಶ್ರೀರಾಮ ಘೋಷಣೆಯನ್ನು ಕೂಗುತ್ತಿದ್ದ ಗುಂಪು ಬಳಿಕ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿತ್ತು.

ಜೋಡಿ ತಮ್ಮ ಮದುವೆಯನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರು ಭಿನ್ನ ಧರ್ಮಗಳಿಗೆ ಸೇರಿದವರು ಎನ್ನುವುದು ಗೊತ್ತಾದಾಗ ಯುವತಿಯ ಕುಟುಂಬಕ್ಕೆ ಮಾಹಿತಿ ನೀಡಿದ್ದೆವು. ಕುಟುಂಬವು ಯುವತಿ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರಿಂದ ಲುಧಿಯಾನಾ ಪೊಲೀಸರಿಗೂ ತಿಳಿಸಿದ್ದೆವು ಎಂದು ಜೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News