×
Ad

"ಹೆಚ್ಚಿನ ಬುಲ್ಡೋಜರ್ ಆಮದು ಮಾಡಬೇಕಾಗಬಹುದೇ?" ಎಂದು ಕೇಳಿದ ʼಟೈಮ್ಸ್‌ ನೌʼ ಪತ್ರಕರ್ತೆ ನಾವಿಕ ಕುಮಾರ್: ಉಗಿದ ಜನತೆ

Update: 2022-04-20 23:44 IST
Photo: Indianexpress, Twitter

ಹೊಸದಿಲ್ಲಿ: ಜಹಾಂಗಿರ್‌ಪುರ್‌ ಗಲಭೆ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿದ್ದಾರೆಂದು ಆರೋಪಿಸಲ್ಪಟ್ಟ ಜನರಿಗೆ ಸಂಬಂಧಪಟ್ಟ ಅಂಗಡಿ, ಜೋಪಡಿಗಳನ್ನು ಸ್ಥಳೀಯಾಡಳಿತ ಬುಲ್ಡೋಝರ್‌ ಮೂಲಕ ನೆಲಸಮಗೊಳಿಸಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಇಂತಹ ಕ್ರಮಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸರ್ಕಾರ ಆರೋಪ ಸಾಬೀತಾಗದೆ ಶಿಕ್ಷೆ ನೀಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ಷೇಪ ಎತ್ತಿದ ಹೊರತಾಗಿಯೂ ಬಿಜೆಪಿ ನೇತೃತ್ವ ಆಡಳಿತ ಅಪರಾಧ ಸಾಬೀತಾಗದೆಯೇ ಶಿಕ್ಷೆ ವಿಧಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. 

ಆಡಳಿತದ ಇಂತಹ ಸರ್ವಾಧಿಕಾರಿ ಧೋರಣೆಗೆ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ, ಪತ್ರಕರ್ತೆ ನಾವಿಕಾ ಕುಮಾರ್, ಮನೆ ಕಳೆದುಕೊಂಡ ಬಡವರನ್ನು ವಿಡಂಬನೆ ಮಾಡುವಂತೆ ಅಸೂಕ್ಷ್ಮವಾಗಿ ಟ್ವೀಟ್ ಮಾಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸರಿಯಾದ ಪ್ರಕ್ರಿಯೆ ಇಲ್ಲದೆ ಬುಲ್ಡೋಝರ್‌ ಬಳಸಿ ಒಂದು ನಿರ್ದಿಷ್ಟ ಸಮುದಾಯದವರನ್ನು ನಿರ್ಗತಿಕರನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ನಾವಿಕಾ ಬುಲ್ಡೋಝರ್‌ಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ ಎಂದು ನಗುವ ಚಿಹ್ನೆಗಳನ್ನು ಹಾಕಿ ಟ್ವೀಟ್‌ ಮಾಡಿದ್ದಾರೆ. 

“ಬುಲ್ಡೋಜರ್‌ಗಳ ಬೇಡಿಕೆಯಲ್ಲಿ ನಾಟಕೀಯ ಹೆಚ್ಚಳವಾಗಿದೆ. ನಾವು ಉತ್ಪಾದನೆಗಾಗಿ ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆಯೇ ಅಥವಾ ನಾವು ಆಮದುಗಳನ್ನು ಅವಲಂಬಿಸಬೇಕೇ? #justAsking” ಎಂದು ನಗುವ ಇಮೋಜಿಗಳೊಂದಿಗೆ ನಾವಿಕಾ ಟ್ವೀಟ್‌ ಮಾಡಿದ್ದಾರೆ. 

ನಾವಿಕಾ ಟ್ವೀಟ್‌ ಗೆ ನೆಟ್ಟಿಗರು ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದು, ಮನೆಗಳನ್ನು ಕಳೆದುಕೊಂಡು ರೋಧಿಸುತ್ತಿರುವವರನ್ನು ಹೀಗೆ ವ್ಯಂಗ್ಯ ಮಾಡಬಾರದಿತ್ತು ಎಂದು ತಪರಾಕಿ ಹಾಕಿದ್ದಾರೆ.

ಹರ್ಮೀತ್‌ ಕೌರ್‌ (@iamharmeetK) ಎಂಬವರು ನಾವಿಕಾ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದು, “ನಗಿರಿ, ನಗಿರಿ, ನೀವು ನಿಮ್ಮನ್ನು ದೇವರಿಗಿಂತ ದೊಡ್ಡವರು ಎಂದು ಭಾವಿಸಿದ್ದೀರ? ಒಂದು ದಿನ ಕರ್ಮ ನಿಮ್ಮನ್ನು ಹಿಡಿಯುತ್ತದೆ, ನೆನಪಿಟ್ಟುಕೊಳ್ಳಿ, ಧ್ವಂಸಗೊಂಡ ಮನೆ, ಅಂಗಡಿಗಳು ಮುಸ್ಲಿಮರಿಗೆ ಸೇರಿದ್ದು ಅನ್ನೋ ಕಾರಣಕ್ಕೆ ಅದನ್ನು ನೋಡಿ ನಗುತ್ತಿದ್ದೀರ…  ನಿಮ್ಮ ಮುಖದಲ್ಲಿ ದುಷ್ಟತನ ಪ್ರತಿಫಲಿಸುತ್ತಿದೆ” ಎಂದು ಬರೆದಿದ್ದಾರೆ. 
 
 ಅನು ಮಿತ್ತಲ್‌ (@anushakunmittal) ಎಂಬವರು ಪ್ರತಿಕ್ರಿಯಿಸಿ, “ಓ ದೇವರೇ, ಬಹುಷ ಇದೇ ಕೊನೆಯ ನಗು ಆಗಿರಬಹುದು” ಎಂದು ಬರೆದಿದ್ದಾರೆ. 

“ಬಡ ಮಹಿಳೆಯೊಬ್ಬಳು ಸುಡು ಬಿಸಿಲಲ್ಲಿ ತನ್ನ ಮಗನೊಂದಿಗೆ ಸರ್ಕಾರದ ದೌರ್ಜನ್ಯದ ನಂತರ ತನ್ನ ಉಳಿದ ಮನೆಯ ಅವಶೇಷಗಳನ್ನು ಸಂಗ್ರಹಿಸುತ್ತಿದ್ದಾಳೆ, ಮತ್ತೊಂದೆಡೆ, ಈ ನಾಚಿಕೆಗೇಡಿನ ಮಹಿಳೆ ಆ ತಾಯಿಯ ದುಃಖವನ್ನು ನೋಡಿ ದೈತ್ಯಾಕಾರದ ನಗೆ ಬೀರುತ್ತಿದ್ದಾಳೆ,  ತಾಯ್ತನದ ಪ್ರಜ್ಞೆ ಇಲ್ಲದ ಇಂತಹ ಮಹಿಳೆಯರು ಹೆಣ್ಣಿನ ಹೆಸರಿಗೆ ಕಳಂಕ” ಎಂದು ಮುಶೀರ್‌ ಖಾನ್‌ ಎಂಬವರು ಬರೆದಿದ್ದಾರೆ. 

"ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಇದನ್ನು ಈ ಭಕ್ತರು ತಮಾಷೆ ಮಾಡುತ್ತಿದ್ದಾರೆ. ಹಿಂದುತ್ವ ಗ್ಯಾಂಗ್‌ಗೆ ಮಾನವೀಯತೆಯ ಕೊರತೆ ಇದೆ ಎಂದು @illusionistChay ಎಂಬವರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು ಕೇಸರಿಧಾರಿ ವ್ಯಕ್ತಿಗಳು ಕಲ್ಲೆಸೆಯುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಕಲ್ಲೆಸೆಯುತ್ತಿರುವ ಇವರ ಮೇಲೆಯೂ ಏನಾದರೂ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ತಮಿಳುನಾಡಿನ ಹಣಕಾಸು ಸಚಿವ ತಿಲಗರಾಜನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಅನೈತಿಕ, ಅಸಭ್ಯ, ಅಮಾನವೀಯ , ಅಸಂಯಮ, ಸಂಸ್ಕೃತಿಯಿಲ್ಲದ, ಬುದ್ಧಿಹೀನ" ಎಂದು ರಿಟ್ವೀಟ್‌ ಮಾಡಿ ನಾವಿಕಾರಿಗೆ ಛೀಮಾರಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News