ಕೇರಳ: ಸಿಲ್ವರ್ ಲೈನ್‌ಗೆ ಸರ್ವೇ ಕಲ್ಲು ಹಾಕಲು ಪ್ರಯತ್ನ; ಪೊಲೀಸರು, ಪ್ರತಿಭಟನಕಾರರ ನಡುವೆ ಘರ್ಷಣೆ

Update: 2022-04-21 17:49 GMT

ತಿರುವನಂತಪುರ, ಎ. 21: ಕೇರಳ ಸರಕಾರದ ಮಹತ್ವಾಕಾಂಕ್ಷೆಯ ಸಿಲ್ವರ್ ಲೈನ್‌ ರೈಲು ಕಾರಿಡರ್ ಯೋಜನೆಗೆ ಇಲ್ಲಿನ ಕನಿಯಾಪುರಂನಲ್ಲಿ ಗುರುವಾರ ಸರ್ವೇ ಕಲ್ಲುಗಳನ್ನು ಹಾಕುವ ಪ್ರಯತ್ನ ಪೊಲೀಸರು ಹಾಗೂ ಸ್ಥಳೀಯರ ನಡುವಿನ ಘರ್ಷಣೆಗೆ ಕಾರಣವಾಯಿತು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಅಧಿಕಾರಿಗಳು ಸರ್ವೇ ಕಲ್ಲು ಹಾಕುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು ಹಾಗೂ ಅಲ್ಲಿಂದ ತೆರಳಿದರು. ಸರ್ವೇ ಕಲ್ಲುಗಳನ್ನು ಹಾಕಲು ಉಪಕರಣಗಳೊಂದಿಗೆ ಆಗಮಿಸಿದ ಅಧಿಕಾರಿಗಳಿಗೆ ಪ್ರತಿಪಕ್ಷ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದ ಸ್ಥಳೀಯರ ಗುಂಪೊಂದು ತಡೆ ಒಡ್ಡಿತು. 

ಅಧಿಕಾರಿಗಳಿಗೆ ಪೊಲೀಸರು ಬೆಂಗಾವಲು ಒದಗಿಸಿ, ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಲು ಪ್ರಯತ್ನಿಸಿದಾಗ ಘರ್ಷಣೆ ಭುಗಿಲೆದ್ದಿತು. ಕೆಲವು ಪ್ರತಿಭಟನಕಾರರಿಗೆ ಪೊಲೀಸರು ಬೂಟು ಕಾಲಿನಿಂದ ಒದೆಯುತ್ತಿರುವುದು, ಗಾಯಗೊಂಡ ಪ್ರತಿಭಟನಕಾರರು ಅನಂತರ ಸಮೀಪದ ಆಸ್ಪತ್ರೆಗೆ ಧಾವಿಸುತ್ತಿರುವುದನ್ನು ಸ್ಥಳೀಯ ಟಿ.ವಿ. ಚಾನೆಲ್ ಗಳು ಪ್ರಸಾರ ಮಾಡಿದ ವೀಡಿಯೊಗಳಲ್ಲಿ ಕಂಡು ಬಂದಿದೆ. 
ನಾವು ಈ ಸ್ಥಳದಲ್ಲಿ ಸೇರುವುದನ್ನು ಮುಂದುರಿಸಲಿದ್ದೇವೆ.  ಅಲ್ಲದೆ, ಅಧಿಕಾರಿಗಳಿಗೆ ಸರ್ವೇ ಕಲ್ಲುಗಳನ್ನು ಹಾಕಲು ಅವಕಾಶ ನೀಡಲಾರೆವು ಎಂದು ಪ್ರತಿಭಟನಕಾರೋರ್ವರು ತಿಳಿಸಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಇಲ್ಲಿನ ನಿವಾಸಿಗಳಿಗೆ ಪೂರ್ವಭಾವಿಯಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ. 

ಪ್ರತಿಭಟನಕಾರರೊಂದಿಗೆ ನಿಷ್ಕರುಣೆಯಿಂದ ವರ್ತಿಸಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ನಾವು ಯಾವ ಪ್ರತಿಭಟನಕಾರನಿಗೂ ಒದ್ದಿಲ್ಲ. ಆದರೆ, ಕೆ-ರೈಲ್ ಅಧಿಕಾರಿಗಳಿಗೆ ರಕ್ಷಣೆ ನೀಡಲು ಮಾತ್ರ ಪ್ರಯತ್ನಿಸಿದ್ದೇವೆ. ಕೇರಳದ ವಿವಿಧ ಭಾಗಗಳಲ್ಲಿ ಆರಂಭದಿಂದಲೂ ಸಾಮೂಹಿಕ ಪ್ರತಿಭಟನೆಗೆ ಕಾರಣವಾಗಿದ್ದ ಈ ಯೋಜನೆಗೆ ಸುಮಾರು ಒಂದು ತಿಂಗಳು ಅಂತರದ ಬಳಿಕ ಸರ್ವೇ ಕಲ್ಲು ಹಾಕುವ ಪ್ರಕ್ರಿಯೆನ್ನು ಅಧಿಕಾರಿಗಳು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಭಟನಕಾರರನ್ನು ರಾಜ್ಯ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಭೇಟಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News