×
Ad

ಬುಲ್ಡೋಝರ್‌ ರಾಜಕಾರಣ ವಿವಾದದ ನಡುವೆ ಬುಲ್ಡೋಝರ್‌ ಏರಿ ಪೋಸ್‌ ನೀಡಿದ ಬ್ರಿಟನ್‌ ಪ್ರಧಾನಿ: ನೆಟ್ಟಿಗರ ಆಕ್ರೋಶ

Update: 2022-04-22 22:34 IST

ಕಳೆದ ಕೆಲವು ದಿನಗಳಲ್ಲಿ ಭಾರತದ ವಿವಿಧ ರಾಜ್ಯದಲ್ಲಿ ನಡೆಯುತ್ತಿರುವ ಬುಲ್ಡೋಝರ್ ರಾಜಕಾರಣದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಸ್ವರ ಎದ್ದಿದೆ. ಗಲಭೆಯಲ್ಲಿ ಆರೋಪಿಗಳೆಂದು ಮುಸ್ಲಿಮರ ಆಸ್ತಿ-ಪಾಸ್ತಿಯನ್ನೇ ಗುರಿಯಾಗಿಸಿ ಸರ್ಕಾರ ಕೆಡವುತ್ತಿದೆ ಎಂದು ಆರೋಪ ಕೇಳಿಬಂದಿದೆ. ಈ ನಡುವೆ, ಭಾರತ ಭೇಟಿಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬುಲ್ಡೋಝರ್ ಒಂದರ ಮೇಲೇರಿ ಕುಳಿತು ಪೋಸ್ ನೀಡಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. 

ಎರಡು ದಿನಗಳ ಭಾರತ ಭೇಟಿಯಲ್ಲಿರುವ ಜಾನ್ಸನ್, ವಡೊದರದ ಜೆಸಿಬಿ ಕಾರ್ಖಾನೆ ಒಂದರಲ್ಲಿ ಬುಲ್ಡೋಝರ್ ಏರಿ ಪೋಸ್ ನೀಡಿದ್ದಾರೆ. ಜಹಾಂಗೀರ್ ಪುರಿಯಲ್ಲಿನ ಮುಸ್ಲಿಮರ ಮನೆಗಳನ್ನು ಬುಲ್ಡೋಝರ್ ಮೂಲಕ ಕೆಡವಿದ ಒಂದು ದಿನದ ಬೆನ್ನಲ್ಲೇ ಹೊರಬಂದ ಜಾನ್ಸನ್ ಚಿತ್ರ ಚರ್ಚೆ ಹುಟ್ಟುಹಾಕಿದೆ.
ಬುಲ್ಡೋಜರ್ ಬಲಪಂಥೀಯ ಆಡಳಿತದಿಂದ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ದಮನದ ಸಂಕೇತವಾಗಿ ಮಾರ್ಪಟ್ಟಿರುವಾಗ, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದಲ್ಲಿ ಬುಲ್ಡೋಜರ್ ಸವಾರಿ ಮಾಡುವ ಮೂಲಕ ಭಾರತದ ಇಸ್ಲಾಮೋಫೋಬಿಯಾವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆಯೇ?  ಎಂದು ಪ್ರೊಫೆಸರ್ ಅಶೋಕ್ ಸ್ವೈನ್ ಪ್ರಶ್ನಿಸಿದ್ದಾರೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ನಿನ್ನೆ ವಾಯುವ್ಯ ದೆಹಲಿಯ ಜಹಾಂಗೀರಪುರಿಯಲ್ಲಿ ಮುಸ್ಲಿಮರ ಅಂಗಡಿಗಳನ್ನು ಜೆಸಿಬಿ ಬುಲ್ಡೋಜರ್‌ಗಳನ್ನು ಬಳಸಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ, ಬ್ರಿಟನ್ ಪ್ರಧಾನಿ ಗುಜರಾತ್‌ನಲ್ಲಿ ಜೆಸಿಬಿ ಕಾರ್ಖಾನೆಯನ್ನು ಉದ್ಘಾಟಿಸಿರುವುದು ಅಜ್ಞಾನ ಮಾತ್ರವಲ್ಲ, ಘಟನೆಯ ಬಗ್ಗೆ ಅವರ ಮೌನವು ಕಿವುಡಾಗಿದೆ ಎಂದು ಸರಣಿ ಟ್ವೀಟ್ ಮಾಡಿದೆ.

"ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ @TanDhesi.  ಜೆಸಿಬಿ ಬುಲ್ಡೋಜರ್‌ಗಳು ಭಾರತದಲ್ಲಿ ಮುಸ್ಲಿಮರನ್ನು ಕಿತ್ತೊಗೆಯುವ ಸಂಕೇತವಾಗಿ ಮಾರ್ಪಟ್ಟಿರುವ ಸಮಯದಲ್ಲಿ, ಬ್ರಿಟಿಷ್ ಪ್ರಧಾನಿ ಭಾರತದಲ್ಲಿ ಸವಾರಿ ಮಾಡುತ್ತಿದ್ದಾರೆ.  ಇದು ಅವಮಾನ ಮತ್ತು ಫ್ಯಾಸಿಸ್ಟ್ ಕ್ರೌರ್ಯದ ಮುಕ್ತ ಅನುಮೋದನೆಯಂತೆ ಕಾಣುತ್ತದೆ." ಎಂದು ಅಲಿಸನ್ ಜಾಫ್ರಿ ಟ್ವೀಟ್ ಮಾಡಿದ್ದಾರೆ. 

ಅದಕ್ಕೂ ಮೊದಲು, ಸಾಬರಮತಿಗೆ ಭೇಟಿ ನೀಡಿದ್ದ ಜಾನ್ಸನ್, ಗಾಂಧಿ ಚರಕದ ಮುಂದೆ ಕೂತು ಫೋಟೋ ತೆಗೆಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ವಿಟರ್ ಬಳಕೆದಾರರೊಬ್ಬರು, ಜಾನ್ಸನ್ ಗಾಂಧಿ ಚರಕದಿಂದ ಮೋದಿಯ ಬುಲ್ಡೋಝರ್ ವರೆಗೆ 1947  ರಿಂದ 2022 ರವರೆಗಿನ ಭಾರತದ ಚರಿತ್ರೆಯನ್ನು ಪ್ರತಿನಿಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News