×
Ad

ಬಿಸಿ ಗಾಳಿ, ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಕ್ಷಾಮ ಭೀತಿ

Update: 2022-04-23 07:50 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದ ಹಲವು ಕಡೆಗಳಲ್ಲಿ ಉಷ್ಣಗಾಳಿಯ ಪರಿಸ್ಥಿತಿ ಇದ್ದು, ಇದರಿಂದಾಗಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದ್ದು, ಕನಿಷ್ಠ ಏಳು ರಾಜ್ಯಗಳಲ್ಲಿ ಬ್ಲಾಕೌಟ್ ಘೋಷಿಸುವ ಸಾಧ್ಯತೆ ಇದೆ. ಈ ಬೇಸಿಗೆಯಲ್ಲಿ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ವ್ಯಾಪಕವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಮಾರ್ಚ್ ಮಧ್ಯದಿಂದೀಚೆಗೆ ಉಷ್ಣಗಾಳಿಯ ವಾತಾವರಣದಿಂದಾಗಿ ಏಳು ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಗೋವಾ ಮತ್ತು ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಕಡಿಮೆ ಮಾಡಲಾಗಿದೆ. ಅಂತೆಯೇ ಕೃಷಿ ವಲಯಕ್ಕೆ ಕೂಡಾ ವೇಳಾಪಟ್ಟಿಗೆ ಅನುಗುಣವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಏಪ್ರಿಲ್ ಮೊದಲ ವಾರ ದೇಶದಲ್ಲಿ 38 ವರ್ಷಗಳಲ್ಲೇ ಗರಿಷ್ಠ ವಿದ್ಯುತ್ ಬೇಡಿಕೆ ಕಂಡುಬಂದಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಹೇಳಿದೆ.

ವಿದ್ಯುತ್ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 26 ದಿನಗಳ ಕಾಲ ನಿರಂತರವಾಗಿ ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕಾದರೆ ಲಭ್ಯವಿರುವ ಕಲ್ಲಿದ್ದಲು ದಾಸ್ತಾನು ಕಡಿಮೆ ಇದೆ. ಒಡಿಶಾ, ಜಾರ್ಖಂಡ್ ಹಾಗೂ ಛತ್ತಿಸ್‍ಗಢ ಹೀಗೆ ಕಲ್ಲಿದ್ದಲು ಸಮೃದ್ಧ ರಾಜ್ಯಗಳಲ್ಲಿ ಮಾತ್ರ ಸಾಕಷ್ಟು ದಾಸ್ತಾನು ಇದೆ. ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮಟ್ಟದ 1-5%, ರಾಜಸ್ಥಾನದಲ್ಲಿ 1-25%, ಉತ್ತರ ಪ್ರದೇಶದಲ್ಲಿ 14-21% ಮತ್ತು ಮಧ್ಯಪ್ರದೇಶದಲ್ಲಿ 6-13% ಮಾತ್ರ ದಾಸ್ತಾನು ಇದೆ. ದೇಶಾದ್ಯಂತ ಸರಾಸರಿ ದಾಸ್ತಾನು ಶೇಕಡ 36ರಷ್ಟಿದ್ದು, ಇದು ಕಳೆದ ವಾರಕ್ಕೆ ಹೋಲಿಸಿದರೆ ಶೇಕಡ 2ರಷ್ಟು ಕಡಿಮೆ. ಮಾರ್ಚ್ ಮಧ್ಯಭಾಗದ ವೇಳೆಗೆ ಈ ಪ್ರಮಾಣ ಶೇಕಡ 50ರಷ್ಟಿತ್ತು.

ದೇಶಾದ್ಯಂತ ಗರಿಷ್ಠ ಅಗತ್ಯತೆಯಾದ 1,88,576 ಮೆಗಾವ್ಯಾಟ್‍ಗೆ ಹೋಲಿಸಿದರೆ ಕೊರತೆ ಪ್ರಮಾಣ ಕೇವಲ 3002 ಮೆಗಾವ್ಯಾಟ್ ಎಂದು ವಿದ್ಯುತ್ ಸಚಿವಾಲಯದ ಪೋರ್ಟೆಲ್ ಹೇಳುತ್ತದೆ. ಆದರೆ ರಾಜ್ಯಗಳ ಹೆಚ್ಚುವರಿ ಬೇಡಿಕೆಯನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಪೂರೈಸುತ್ತಿಲ್ಲ ಎನ್ನುವುದು ಹಲವು ರಾಜ್ಯಗಳ ಅಹವಾಲು.

ಮಧ್ಯಪ್ರದೇಶದ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ 1000 ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಅಂತೆಯೇ ಪಂಜಾಬ್‍ನ ಹೆಚ್ಚುವರಿ ಅಗತ್ಯತೆಯನ್ನು ಕೂಡಾ ಪೂರೈಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News