×
Ad

ವರ್ಗಾವಣೆ ಆದೇಶದಿಂದ ಅಸಮಾಧಾನಗೊಂಡು ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕಿಯರು!

Update: 2022-04-23 10:46 IST
ಸಾಂದರ್ಭಿಕ ಚಿತ್ರ

ಲಖಿಂಪುರ ಖೇರಿ (ಉತ್ತರಪ್ರದೇಶ): ಲಖಿಂಪುರ ಖೇರಿ ಜಿಲ್ಲೆಯ ಬೆಹ್ಜಾಮ್‌ನಲ್ಲಿ ತಮ್ಮ ವರ್ಗಾವಣೆ ಆದೇಶದಿಂದ ಅಸಮಾಧಾನಗೊಂಡಿದ್ದ ಇಬ್ಬರು ಶಿಕ್ಷಕಿಯರು ವರ್ಗಾವಣೆ ಆದೇಶ ರದ್ದುಪಡಿಸಲು ಜಿಲ್ಲೆಯ ಅಧಿಕಾರಿಗಳಿಗೆ ಒತ್ತಡ ಹೇರಲು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಸುಮಾರು 24 ವಿದ್ಯಾರ್ಥಿನಿಗಳನ್ನು ಶಾಲೆಯ ಮೇಲ್ಛಾವಣಿಯ ಮೇಲೆ ಬೀಗ ಹಾಕಿ ಕೂಡಿಹಾಕಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಹಲವಾರು ಗಂಟೆಗಳ ಪ್ರಯತ್ನದ ಬಳಿಕ ಹುಡುಗಿಯರನ್ನು ಅವರ ಹಾಸ್ಟೆಲ್‌ಗೆ ಕರೆತರುವಲ್ಲಿ ಯಶಸ್ವಿಯಾದರು.

"ಶಿಸ್ತಿನ ಆಧಾರದಲ್ಲಿ ಇತರ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ತಮ್ಮ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಶಿಕ್ಷಕಿಯರು ಇಂತಹ ತಂತ್ರಗಳನ್ನು ಅನುಸರಿಸಿದ್ದರು" ಎಂದು ಲಖೀಂಪುರ ಖೇರಿಯ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಘಟನೆಯ ಬಗ್ಗೆ ಹಾಸ್ಟೆಲ್ ವಾರ್ಡನ್ ಲಲಿತ್ ಕುಮಾರಿ ಅವರು ಪಾಂಡೆ ಹಾಗೂ  ಬಾಲಕಿಯರ ಶಿಕ್ಷಣದ ಜಿಲ್ಲಾ ಸಂಯೋಜಕಿ ರೇಣು ಶ್ರೀವಾಸ್ತವ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಶಾಲೆಗೆ ಧಾವಿಸಿ ಹಲವಾರು ಗಂಟೆಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿದರು.

ಸ್ಥಳೀಯ ಪೊಲೀಸರ ಮಹಿಳಾ ಸಿಬ್ಬಂದಿಯನ್ನು ಸಹ ಕರೆಸಲಾಯಿತು ಹಾಗೂ ತ್ತು ಸಮಸ್ಯೆಯನ್ನು ಪರಿಹರಿಸಲಾಯಿತು ಎಂದು ಪಾಂಡೆ ಹೇಳಿದರು.

ಇಬ್ಬರು ಶಿಕ್ಷಕಿಯರಾದ ಮನೋರಮಾ ಮಿಶ್ರಾ  ಹಾಗೂ  ಗೋಲ್ಡಿ ಕಟಿಯಾರ್ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ. ಮೂರು ದಿನಗಳಲ್ಲಿ ಸಮಿತಿ ವರದಿ ಸಲ್ಲಿಸಲಿದೆ’’ ಎಂದು ಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News