ಗುಜರಾತ್ ನ ಪಾಟಿದಾರ್ ನಾಯಕ ನರೇಶ್ ಪಟೇಲ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಅಹಮದಾಬಾದ್: ಗುಜರಾತ್ ನ ಪಾಟಿದಾರ್ ನಾಯಕ ನರೇಶ್ ಪಟೇಲ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಅವರು ಶನಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು India Today ವರದಿ ಮಾಡಿದೆ.
ಕಳೆದ ಹಲವು ತಿಂಗಳುಗಳಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ನರೇಶ್ ಪಟೇಲ್ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಆದರೆ, ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮನವೊಲಿಕೆಗೆ ಒಳಗಾಗಿರುವ ಈ ನಾಯಕ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ. ತನ್ನ ಪಟೇಲ್ ಸಮಾಜ ಹೇಳಿದಾಗ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನರೇಶ್ ಪಟೇಲ್ ಅವರು ಶ್ರೀ ಖೋಡಲ್ಧಾಮ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ. ಇದು ಲೆಯುವಾ ಪಟೇಲ್ ಸಮುದಾಯದಿಂದ ಪೂಜಿಸಲ್ಪಟ್ಟ ಮಾ ಖೋಡಿಯಾರ್ ದೇವಾಲಯವನ್ನು ನಿರ್ವಹಿಸುತ್ತದೆ. ಲೆಯುವಾ ಪಟೇಲರು ಮುಖ್ಯವಾಗಿ ಗುಜರಾತ್‌ನಲ್ಲಿ ವಾಸಿಸುವ ಪಾಟಿದಾರ್ ಸಮುದಾಯದ ಉಪಜಾತಿ.
ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಮತವನ್ನು ಹೆಚ್ಚು ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ ಹಾಗೂ ಅನೇಕ ಸ್ಥಾನಗಳ ಭವಿಷ್ಯವು ಈ ಸಮುದಾಯದ ಮತಗಳ ಮೇಲೆ ಅವಲಂಬಿತವಾಗಿರುತ್ತದೆ.