ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆ ಅಗತ್ಯ: ಜಸ್ಟೀಸ್ ಎಸ್. ಅಬ್ದುಲ್ ನಝೀರ್
ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆ ಅಗತ್ಯ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ತಿಳಿಸಿದ್ದಾರೆ.
ಅವರು ಮಂಗಳೂರು ವಿಶ್ವ ವಿದ್ಯಾಲಯದ ಮಂಗಳ ಸಭಾಂಗಣದಲ್ಲಿಂದು 40ನೆ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ನೆರವೇರಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಮತ್ತು ಪ್ರಜಾಪ್ರಭುತ್ವ ನಿಕಟ ಸಂಬಂಧ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಮಾಣದಲ್ಲಿ ಶಿಕ್ಷಣದಲ್ಲಿ, ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿಶ್ವ ವಿದ್ಯಾನಿಲಯಗಳು ಸಮಾಜದ ಪ್ರತಿ ಸ್ವರೂಪಗಳು. ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ, ಆರ್ಥಿಕ, ಸಾಮಾಜಿಕ ನ್ಯಾಯ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದು ಶಿಕ್ಷಣ ಸಂಸ್ಥೆಗಳು ಸುಸ್ಥಿರ ಪ್ರಜಾಪ್ರಭುತ್ವಕ್ಕೆ ಕಾರಣವಾಗಬೇಕೆಂದು ನ್ಯಾಯಧೀಶರು ತಿಳಿಸಿದ್ದಾರೆ.
ಮಾತೆರೆಗ್ಲಾ ನಮಸ್ಕಾರ......
ತುಳು ಭಾಷೆಯಲ್ಲಿ ಎಲ್ಲರನ್ನೂ ಸಂಬೋಧಿಸಿ ಮಾತನಾಡಿದ ಮುಖ್ಯ ನ್ಯಾಯಾಧೀಶರು ಬಳಿಕ ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದರು.
ಕರ್ನಾಟಕ ಸರಕಾರದ ರಾಜ್ಯಪಾಲ ಮತ್ತು ಮಂಗಳೂರು ವಿ.ವಿ.ಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಮಂಗಳೂರು ವಿಶ್ವವಿದ್ಯಾಲಯದ 40ನೆ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ದೇಶದ ಎಲ್ಲಾ ಜನರ ಅಭಿವೃದ್ಧಿಗೆ ಯುವ ಜನರು ಕೊಡುಗೆ ನೀಡಬೇಕಾದ ಅಗತ್ಯವಿದೆ ಎಂದರು.
ವಿ.ವಿ.ಯ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಸ್ವಾಗತಿಸಿದರು. ಆಡಳಿತ ಕುಲಸಚಿವ ಕಿಶೋರ್ ಕುಮಾರ್ ಕೆ, ಪರಿಕ್ಷಾಂಗ ಕುಲಸಚಿವ ಪಿ.ಎಲ್. ಧರ್ಮ, ಸಿಂಡಿಕೇಟ್ ಮತ್ತು ವಿ.ವಿ.ಅಕಾಡಮಿಕ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ಧನಂಜಯ ಕುಂಬ್ಳೆ, ಉಪನ್ಯಾಸಕಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.
153 ಮಂದಿಗೆ ಪಿ.ಎಚ್.ಡಿ. ಪದವಿ, 52 ಮಂದಿಗೆ ಚಿನ್ನದ ಪದಕ, 192 ವಿದ್ಯಾರ್ಥಿಗಳಿಗೆ ರ‍್ಯಾಂಕ್ ವಿತರಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾಲಯದ 40ನೆ ಘಟಿಕೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ ಸಮಾಜ ಸೇವಕಿ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಮತ್ತು ಡಾ.ಶಿವಾನಂದ ನಾಯ್ಕ್ ಅವರಿಗೆ ವಿಜ್ಞಾನ (ಸಂಶೋಧನೆಗೆ ) ಡಾಕ್ಟರೇಟ್ ಪುರಸ್ಕಾರ ನೀಡಲಾಯಿತು.