×
Ad

ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್ ಬೆರಿ ನೇಮಕ

Update: 2022-04-23 23:44 IST
Photo: Twitter@sumanbery

ಹೊಸದಿಲ್ಲಿ,ಎ.24: ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್ ಕೆ.ಬೆರಿ ನೇಮಕಗೊಂಡಿದ್ದಾರೆ. ಹಾಲಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಹಠಾತ್ ರಾಜೀನಾಮೆಯ ಹಿನ್ನೆಲೆಯಲ್ಲಿ ತೆರವಾದ ಸ್ಥಾನವನ್ನು ಬೆರಿ ತುಂಬಲಿದ್ದಾರೆ. 2022ರ ಮೇ 1ರಂದು ಬೆರಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸರಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ. ಪ್ರಧಾನಿಯವರು ನೀತಿ ಆಯೋಗದ ಅಧ್ಯಕ್ಷರಾಗಿರುತ್ತಾರೆ.

 ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಎಪ್ರಿಲ್ 30ರಂದು ಕೊನೆಗೊಳ್ಳುವುದರಲ್ಲಿತ್ತು. ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದ್ದು, ಅವರನ್ನು ಎಪ್ರಿಲ್ 30ರಿಂದ ಅನ್ವಯವಾಗುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಅರ್ಥಶಾಸ್ತ್ರಜ್ಞರಾದ ರಾಜೀವ್ ಕುಮಾರ್ 2017ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು. ಅವರು ಕೃಷಿಗೆ ಆದ್ಯತೆ, ಆಸ್ತಿಗಳ ನಗದೀಕರಣ, ಹೂಡಿಕೆ ಹಿಂತೆಗೆತ, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಸೇರಿದಂತೆ ನೀತಿ ಆಯೋಗದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ನೂತನ ಅಧ್ಯಕ್ಷರಾಗಿ ನಿಯೋಜಿತರಾದ ಬೆರಿ ಅವರು ಈ ಹಿಂದೆ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನೆ (ಎನ್‌ಸಿಎಇಆರ್)ನ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿಯರ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಹಾಗೂ ಹಣಕಾಸು ನೀತಿ ಕುರಿತ ಭಾರತೀಯ ರಿಸರ್ವ್ ಬ್ಯಾಂಕ್‌ನ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News