ಖರಗೋನ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಿದ ಆರೋಪಿಯ ಬಂಧನ

Update: 2022-04-24 03:55 GMT

ಭೋಪಾಲ: ಮಧ್ಯಪ್ರದೇಶದ ಖರಗೋನ್ ನಗರದಲ್ಲಿ ಎಪ್ರಿಲ್ 10ರಂದು ನಡೆದ ಕೋಮು ಹಿಂಸಾಚಾರದ ಸಂದರ್ಭ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಚೌಧರಿ ಮೇಲೆ ಗುಂಡು ಹಾರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಾಸ್ರವಾಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಆರೋಪಿ ಮೊಹ್ಸಿನ್ ಅಲಿಯಾಸ್ ವಸೀಮ್‌ನನ್ನು ಬಂಧಿಸಲಾಗಿದೆ ಎಂದು ನಿಮಾರ್ ವಲಯದ ಐಜಿಪಿ ತಿಲಕ್ ಸಿಂಗ್ ತಿಳಿಸಿದ್ದಾರೆ. ಹಲ್ಲೆ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಸಾಗಾಟ ಸೇರಿದಂತೆ ನಾಲ್ಕು ಪ್ರಕರಣಗಳು ಈಗಾಗಲೇ ಮೊಹ್ಸಿನ್ ವಿರುದ್ಧ ದಾಖಲಾಗಿದೆ.

ಸಹವರ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೋಮು ಹಿಂಸಾಚಾರದ ಸಂದರ್ಭ ಇಬ್ರೈಶ್ ಖಾನ್ ಅವರನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸರು ಗುರುವಾರ 5 ಮಂದಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಖಾನ್ ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಅನಂತರ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಹಿಂಸಾಚಾರದಲ್ಲಿ ಮೃತಪಟ್ಟ ಏಕೈಕ ವ್ಯಕ್ತಿ ಅವರಾಗಿದ್ದರು. ಅಲ್ಲದೆ, ಚೌಧರಿ ಸೇರಿದಂತೆ 24 ಮಂದಿ ಗಾಯಗೊಂಡಿದ್ದರು.

 ಪ್ರಸ್ತುತ ಸಿದ್ಧಾರ್ಥ ಚೌಧರಿ ಅವರು ರಜೆಯಲ್ಲಿದ್ದಾರೆ. ಕಾಲಿಗೆ ಗುಂಡು ತಗುಲಿ ಆಗಿರುವ ಗಾಯಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News