×
Ad

ಹೊಸ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಸ್ಫೋಟ: ಓರ್ವ ಮೃತ್ಯು

Update: 2022-04-24 11:22 IST

ಅಮರಾವತಿ: ಹೊಸ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ  40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯವಾಡ ನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ಬ್ಯಾಟರಿಯು ವ್ಯಕ್ತಿಯು  ಮಲಗಿದ್ದ ಕೋಣೆಯಲ್ಲಿ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ವ್ಯಕ್ತಿಯ  ಪತ್ನಿ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಯ  ಇಬ್ಬರು ಮಕ್ಕಳು ಸಹ ಉಸಿರುಕಟ್ಟುವಿಕೆಯಿಂದ ಬಳಲುತ್ತಿದ್ದು  ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ನೆರೆಯ ತೆಲಂಗಾಣದ ನಿಝಾಮಾಬಾದ್ ಪಟ್ಟಣದಲ್ಲಿ ಎಲೆಕ್ಟ್ರಿಕ್  ವಾಹನದ ಬ್ಯಾಟರಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ 80 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿತ್ತು

ಡಿಟಿಪಿ ಕೆಲಸಗಾರನಾಗಿ ಸ್ವಯಂ ಉದ್ಯೋಗ ಮಾಡಿಕೊಂಡಿದ್ದ ಮೃತ ವ್ಯಕ್ತಿ ಕೆ. ಶಿವಕುಮಾರ್ ಶುಕ್ರವಾರವಷ್ಟೇ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು.

ಶುಕ್ರವಾರ ರಾತ್ರಿ ಶಿವಕುಮಾರ್ ಅವರು ತಾವು  ಮಲಗುವ ಕೋಣೆಯಲ್ಲಿ ವಾಹನದ ಡಿಟ್ಯಾಚೇಬಲ್ ಬ್ಯಾಟರಿಯನ್ನು ಚಾರ್ಜ್‌ನಲ್ಲಿ ಇಟ್ಟಿದ್ದರು. ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಸೂರ್ಯರಾವ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ವಿ . ಜಾನಕಿ ರಾಮಯ್ಯ ತಿಳಿಸಿದ್ದಾರೆ.

ಸ್ಫೋಟದಿಂದಾಗಿ ಮನೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಹವಾನಿಯಂತ್ರಣ ಯಂತ್ರ ಹಾಗೂ  ಕೆಲವು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ.

ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಬಾಗಿಲು ಒಡೆದು ಒಳಗೆ ಸಿಲುಕಿಕೊಂಡಿದ್ದ ಕುಟುಂಬವನ್ನು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News