ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ: ಕೆನಡಾದಲ್ಲಿರುವ ದಕ್ಷಿಣ ಏಷ್ಯನ್ನರ ಖಂಡನೆ

Update: 2022-04-25 05:56 GMT
(File Photo)

ಹೊಸದಿಲ್ಲಿ: "ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಜತೆ ನಂಟು ಹೊಂದಿರುವ ಬಲಪಂಥೀಯ ಗುಂಪುಗಳು ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡನೀಯ" ಎಂದು ಕೆನಡಾದಲ್ಲಿರುವ ದಕ್ಷಿಣ ಏಷ್ಯಾ ಮೂಲದ ಮುಖಂಡರು ಹೇಳಿಕೆ ನೀಡಿದ್ದಾರೆ ಎಂದು thewire.in ವರದಿ ಮಾಡಿದೆ.

"ದೇಶದಲ್ಲಿ ಕಳೆದ ಕೆಲ ತಿಂಗಳಿಂದ ಹಿಂದೂ ಫ್ಯಾಸಿಸ್ಟ್ ಗುಂಪುಗಳು ಇಸ್ಲಮೋಫೋಬಿಕ್ ಮತ್ತು ಸ್ತ್ರೀದ್ವೇಷವಾದಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ತೀರಾ ಇತ್ತೀಚಿನ ಕೆಲ ಘಟನೆಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದಾಗಿದೆ" ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಲಾಗಿದೆ.
ರಾಮನವಮಿ ಸಂದರ್ಭದಲ್ಲಿ ಅಂದರೆ ಎ. 10ರಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಡೆದ ಹಲ್ಲೆಯನ್ನು ಉದಾಹರಿಸಲಾಗಿದೆ. ಹಿಂದೂಗಳು ಸಸ್ಯಾಹಾರವನ್ನು ಸೇವಿಸಬೇಕಾದ ಒಂಬತ್ತು ದಿನಗಳ ಅವಧಿಯನ್ನು ಬಲಪಂಥೀಯ ರಾಷ್ಟ್ರೀಯವಾದಿಗಳು ಮಾಂಸಾಹಾರ ಮಾರಾಟ ಮಾಡುವ ಅಂಗಡಿಗಳ ಮೇಲಿನ ದಾಳಿಗಾಗಿ ಬಳಸಿಕೊಂಡರು ಎಂದು ಆಕ್ಷೇಪಿಸಲಾಗಿದೆ.
ಅದರಲ್ಲೂ ಪ್ರಮುಖವಾಗಿ ಎಬಿವಿಪಿ ಮಾಂಸ ನಿಷೇಧಕ್ಕೆ ಆಗ್ರಹಿಸುತ್ತಿದ್ದು, ಬಹುತೇಕ ಕೆಳವರ್ಗದವರು ಮತ್ತು ಮುಸ್ಲಿಮರೇ ಆಗಿರುವ ಮಾಂಸ ಮಾರಾಟಗಾರರ ಮೇಲೆ ಹಲ್ಲೆ ನಡೆಸುತ್ತಿದೆ. ಮಾಂಸ ನಿಷೇಧದ ಕೂಗು ಕೇವಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಸೀಮಿತವಾಗಿದ್ದು, ಸ್ಥಳೀಯ ನಗರಾಡಳಿತದ ಅಧಿಕಾರಿಗಳು ಕೂಡಾ ಸಣ್ಣ ವ್ಯಾಪಾರಿಗಳು ಮಾಂಸ ಮಾರಾಟ ಮಾಡದಂತೆ ತಡೆಯತ್ತಿದ್ದಾರೆ ಎಂದು ಆಪಾದಿಸಲಾಗಿದೆ.
ಕೇವಲ ಮಾಂಸ ವಿಚಾರದಲ್ಲಿ ಮಾತ್ರ ಮುಸ್ಲಿಂ ವ್ಯಾಪಾರಿಗಳನ್ನು ಗುರಿ ಮಾಡುತ್ತಿಲ್ಲ. ಕರ್ನಾಟಕದಲ್ಲಿ ದೇವಾಲಯ ಜಾತ್ರೆಗಳಲ್ಲಿ ಕೂಡಾ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸಲಾಗುತ್ತಿದೆ. ಜಾತ್ಯತೀತವಾಗಿ ಇರಬೇಕಾದ ವಿಶ್ವವಿದ್ಯಾನಿಲಯ ಕ್ಯಾಂಪಸ್ಗಳನ್ನು ಕೂಡಾ ಬಿಟ್ಟಿಲ್ಲ ಎಂದು ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ರಾಮನವಮಿ ಹಿಂಸಾಚಾರವನ್ನು ಉದಾಹರಿಸಿ ಟೀಕಿಸಲಾಗಿದೆ.
ಹೈದರಾಬಾದ್ ವಿವಿಯಲ್ಲಿ ಎಬಿವಿಪಿ ಕಾರ್ಯಕರ್ತರು ರಾಮ ಮತ್ತು ಹನುಮಾನ್ ವಿಗ್ರಹ ಸ್ಥಾಪಿಸಿರುವುದನ್ನೂ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News