×
Ad

ಇದು ಎಲ್ಲರಿಗೂ ಒಂದು ಸಂದೇಶ: ಮೇವಾನಿ ವಿರುದ್ಧ ದೂರು ದಾಖಲಿಸಿದ್ದ ಬಿಜೆಪಿ ನಾಯಕ

Update: 2022-04-24 14:55 IST
ಅರುಪ್ ಕುಮಾರ್ ಡೇ, photo:Facebook

ಗುವಾಹಟಿ,ಎ.24: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ನಕಾರಾತ್ಮಕ ಆನ್ಲೈನ್ ಪೋಸ್ಟ್ಗಳು ಬಿಜೆಪಿ ಕಾರ್ಯಕರ್ತರನ್ನು ನೋಯಿಸುತ್ತವೆ ಮತ್ತು ಮೋದಿ ಕುರಿತು ಟ್ವೀಟಿಸುವಾಗ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಸ್ಸಾಮಿನ ಯುವ ಬಿಜೆಪಿ ನಾಯಕ ಅರೂಪ ಕುಮಾರ್ ಡೇ ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಡೇ ದೂರಿನ ಮೇರೆಗೆ ಅಸ್ಸಾಂ ಪೊಲೀಸರು ಗುಜರಾತ ಶಾಸಕ ಜಿಗ್ನೇಶ್ ಮೇವಾನಿಯವರನ್ನು ಬಂಧಿಸಿದ್ದು,ಶುಕ್ರವಾರ ಸ್ಥಳೀಯ ನ್ಯಾಯಾಲಯವು ಅವರಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿ (ಬಿಟಿಸಿ)ಯ ಚುನಾಯಿತ ಸದಸ್ಯರಾಗಿರುವ ಡೇ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹೊಂದಿರುವ ಬಿಟಿಸಿ ಸರಕಾರದ ಕಾರ್ಯಕಾರಿ ಸದಸ್ಯರಾಗಿದ್ದಾರೆ.

ಮೋದಿ ಕುರಿತು ಆನ್ಲೈನ್ ಪೋಸ್ಟ್ ಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ದಲಿತ ಕಾರ್ಯಕರ್ತ ಹಾಗೂ ವಡಗಾಮ್ ಶಾಸಕ ಮೇವಾನಿಯವರನ್ನು ಗುಜರಾತಿನಲ್ಲಿ ಬಂಧಿಸಿದ್ದ ಅಸ್ಸಾಂ ಪೊಲೀಸರು ಅವರನ್ನು ಕೊಕ್ರಝಾರ್ಗೆ ಕರೆತಂದಿದ್ದಾರೆ.
ಮೇವಾನಿ ವಿರುದ್ಧ ಕ್ರಿಮಿನಲ್ ಒಳಸಂಚು,ಆರಾಧನಾ ತಾಣಕ್ಕೆ ಸಂಬಂಧಿಸಿದ ಅಪರಾಧ,ಧಾರ್ಮಿಕ ಭಾವನೆಗಳಿಗೆ ಅವಮಾನ ಮತ್ತು ಶಾಂತಿಭಂಗಕ್ಕೆ ಕಾರಣವಾಗಬಹುದಾದ ಪ್ರಚೋದನೆ ಆರೋಪಗಳನ್ನು ಹೊರಿಸಲಾಗಿದೆ.

 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡೇ,‘ನಾನು ದೀರ್ಘ ಸಮಯದಿಂದ ಮೇವಾನಿಯವರ ಟ್ವೀಟ್ಗಳ ಮೇಲೆ ನಿಗಾಯಿರಿಸಿದ್ದೆ. ಅವರು ತನ್ನ ಪೋಸ್ಟ್ಗಳ ಮೂಲಕ ಜನರಲ್ಲಿ ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮೋದಿಯವರ ಕುರಿತು ಸದಾ ನಕಾರಾತ್ಮಕ ಮಾತುಗಳನ್ನಾಡುತ್ತಾರೆ. ಮೋದಿಯವರನ್ನು ನಮ್ಮ ಪ್ರಧಾನಿಯಾಗಿ ಪಡೆದಿರುವುದು ನಮ್ಮ ಅದೃಷ್ಟ ಮತ್ತು ಮೇವಾನಿ ಅವರ ಹೆಸರನ್ನು ಇತ್ತೀಚಿನ ಹಿಂಸಾಚಾರದ ಘಟನೆಗಳೊಂದಿಗೆ ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಮೋದಿಯವರು ಹೊಣೆಯೇ? ಗೋಡ್ಸೆ ಮೋದಿಯವರ ದೇವರು ಎಂದು ಮೇವಾನಿ ಹೇಳುತ್ತಾರೆ,ಆ ಬಗ್ಗೆ ಅವರ ಬಳಿ ಪುರಾವೆಯೇನಾದರೂ ಇದೆಯೇ ? ನಾವು ಬಿಜೆಪಿ ಕಾರ್ಯಕರ್ತರಾಗಿದ್ದೇವೆ ಮ್ತು ಮೋದಿಯವರ ಕುರಿತು ಇಂತಹ ದಾರಿತಪ್ಪಿಸುವ ಮತ್ತು ಒಳಸಂಚಿನ ಪೋಸ್ಟ್ಗಳು ಮತ್ತು ಟ್ವೀಟ್ಗಳನ್ನು ನಾವು ಸಹಿಸುವುದಿಲ್ಲ’ ಎಂದರು.‘ಮೇವಾನಿ ವಿರುದ್ಧ ಪೊಲೀಸ್ ದೂರಿನ ಮೂಲಕ ನಾವು ಎಲ್ಲರಿಗೂ ಸಂದೇಶವನ್ನು ರವಾನಿಸಲು ಬಯಸಿದ್ದೇವೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News