ಓಡೋಡಿ ಬಂದು ರಾಜ್‌ ಕಾಲಿಗೆರಗಿದ್ದ ಅಮಿತಾಭ್‌ ಬಚ್ಚನ್:‌ ಮಿಮಿಕ್ರಿ ದಯಾನಂದ್‌ ನೆನಪಿನ ಬುತ್ತಿಯಿಂದ..

Update: 2022-04-24 10:30 GMT
Photo: Facebook/mimicry.dayanand

ವರನಟ ಡಾ ರಾಜ್‌ಕುಮಾರ್ ಅವರು ಇಂದು ಬದುಕಿದ್ದರೆ ಅವರಿಗೆ 93 ವರ್ಷ ವಯಸ್ಸಾಗುತ್ತಿತ್ತು. 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಆಗಿ ಜನಿಸಿದ ಅವರು ರಾಜಕುಮಾರ್ ಎಂದೇ ಜನಪ್ರಿಯರಾಗಿದ್ದರು, ರಾಜಣ್ಣಾ ಎಂದೇ ಅಭಿಮಾನಿಗಳ ಮನೆ ಮಾತಾಗಿದ್ದರು. ಕನ್ನಡ ಕಲೆ ಮತ್ತು ಸಾಹಿತ್ಯದಲ್ಲಿ ಡಾ. ರಾಜ್‌ಗೆ ನಿರ್ವಿವಾದವಾದ ಸ್ಥಾನವಿದೆ. ತಮ್ಮ ಅಸಾಧಾರಣ ನಟನಾ ಕೌಶಲ್ಯದ ಜೊತೆಗೆ, ಅಣ್ಣಾವ್ರು ಎಂದು ಜನಪ್ರಿಯರಾಗಿದ್ದ ರಾಜಕುಮಾರ್ ಅವರು ತಮ್ಮ ವಿನಮ್ರತೆಯಿಂದಲೂ ಪ್ರಸಿದ್ಧರಾಗಿದ್ದರು. ಯಾರೊಂದಿಗೆ ಒಡನಾಡುವಾಗಲೂ ಅವರಿಗೆ ತಮ್ಮ ʼಸೂಪರ್‌ ಸ್ಟಾರ್‌ʼಗಿರಿ ಒಂದು ತಡೆಯಾಗಿ ಬಂದದ್ದೇ ಇಲ್ಲ. ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದ ಅವರು ತಮ್ಮ ಸರಳತೆಯಿಂದ ವಿಶೇಷ ಗಮನ ಸೆಳೆದಿದ್ದರು.

ತಮ್ಮ ಮಿಮಿಕ್ರಿ ಕೌಶಲ್ಯದಿಂದ ಜನಪ್ರಿಯರಾಗಿರುವ ಕಲಾವಿದ ದಯಾನಂದ್, ರಾಜ್‌ ಕುಮಾರ್‌ ಅವರ ಮಗುವಿನಂತಹ ಗುಣವನ್ನು ಕಣ್ತುಂಬಿಕೊಂಡ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ನಿರ್ದೇಶಕ ಕೆ.ವಿ.ರಾಜು ಅವರ ʼಇಂದ್ರಜಿತ್ʼ ಚಿತ್ರದ ಚಿತ್ರೀಕರಣದಲ್ಲಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ರಾಜ್‌ಕುಮಾರ್‌ ರನ್ನು ಭೇಟಿಯಾದ ಕ್ಷಣವನ್ನು ದಯಾನಂದ್‌ ಈಗಲೂ ನೆನಪಿಸಿಕೊಳ್ಳುತ್ತಾರೆ.

“ನಾನು ಅಣ್ಣಾವ್ರು ಜೊತೆ ಪರಶುರಾಮ್ ಚಿತ್ರೀಕರಣದಲ್ಲಿದ್ದಾಗ, (ಅದೇ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದ) ಅಮಿತಾಭ್‌ ಬಚ್ಚನ್‌ರನ್ನು ನಾವು ಭೇಟಿ ಮಾಡಬಹುದೇ ಎಂದು ರಾಜ್‌ಕುಮಾರ್ ನನ್ನನ್ನು ಕೇಳಿದರು. ಖಂಡಿತ, ಅವರು ನಿಮಗೆ ಅವಕಾಶ ನೀಡುತ್ತಾರೆ ಎಂದು ನಾನು ಹೇಳಿದೆ. ಆಗ ರಾಜ್‌ಕುಮಾರ್, ‘ಹೆಚ್ಚು ಭದ್ರತೆ ಇರುತ್ತದೆ ಅಲ್ಲವೇ?‌, ನಮಗೆ ಹೋಗಲು ಬಿಡಬಹುದೇ ಎಂಬರ್ಥದಲ್ಲಿ ಪ್ರಶ್ನಿಸಿದರು.  “ಅಣ್ಣಾವ್ರಿಗೆ ಕರ್ನಾಟಕದಲ್ಲಿ ಪ್ರವೇಶವನ್ನು ಯಾರಾದರೂ ನಿರಾಕರಿಸಬಹುದೇ? ಆದರೂ ಅವರು ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಲು ಅನುಮತಿ ನೀಡುತ್ತಾರೆಯೇ ಎಂದು ಆಶ್ಚರ್ಯಪಡುವ ಸಾಮಾನ್ಯ ಮನುಷ್ಯನಂತೆ ರಾಜ್‌ಕುಮಾರ್‌ ಇದ್ದರು. ಅವರು ಯಾವಾಗಲೂ ಹಾಗೆ ಇರುತ್ತಿದ್ದರು,” ಎಂದು ದಯಾನಂದ ಹೇಳಿದ್ದಾರೆ.

“ಅಮಿತಾಭ್ ಬಚ್ಚನ್ ಸುತ್ತಲೂ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಅವರ ಸುತ್ತ ಅರ್ಧ ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾರಿಗೂ ಅವಕಾಶವಿರಲಿಲ್ಲ. ತಮ್ಮ ಪಾತ್ರಕ್ಕಾಗಿ ಗಡ್ಡವನ್ನು ಸರಿಪಡಿಸುತ್ತಾ ತನ್ನ ಕುರ್ಚಿಯ ಮೇಲೆ ಅಮಿತಾಭ್‌ ಮೇಕಪ್‌ ಹಾಕಿಸುತ್ತಿದ್ದರು. ಅಣ್ಣಾವ್ರನ್ನು ನೋಡಿದ ತಕ್ಷಣ ಎಲ್ಲವನ್ನು ಒಮ್ಮೆಗೇ ನಿಲ್ಲಿಸಿ, ನರ್ಸರಿ ಶಾಲೆಯ ಮಕ್ಕಳು ಅಪ್ಪನನ್ನು ಕಂಡು ಓಡಿ ಬರುವ ಹಾಗೆ ಅಮಿತಾಭ್‌ ರಾಜ್‌ ಕುಮಾರ್‌ ಬಳಿ ಓಡಿ ಬಂದರು. ಅಣ್ಣಾವ್ರು ಹತ್ತಿರ ಓಡಿ ಬಂದವರೇ ಅಣ್ಣಾವ್ರ ಪಾದ ಮುಟ್ಟಿ ನಮಸ್ಕರಿಸಿದರು. ‘ನೀವು ಹೇಳಿದ್ದರೆ ನಾನೇ ಬಂದು ಭೇಟಿ ಮಾಡುತ್ತಿದ್ದೆ. ಇಲ್ಲಿಗೆ ಬಂದಿದ್ದೀರಿ ಸರ್. ನೀವು ಮಹಾನ್ ವ್ಯಕ್ತಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸರ್’ ಎಂದು ಅಮಿತಾಭ್‌ ಹೇಳಿರುವುದನ್ನು ದಯಾನಂದ್‌ ನೆನಪಿಸುತ್ತಾರೆ.

 “ಅಣ್ಣಾವ್ರು ಇಂಗ್ಲಿಷ್ ಮಾತನಾಡುವುದನ್ನು ನಾನು ಮೊದಲ ಬಾರಿಗೆ ನೋಡಿದೆ. ಅವರು ಅಮಿತಾಭ್ ಅವರಿಗೆ, ‘ನನ್ನ ಮಗ ಪುನೀತ್ ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಕ್ಕಳೆಲ್ಲ ನಿಮ್ಮ ಅಭಿಮಾನಿಗಳು. ಈಗ ನಿಮ್ಮ ಕೈ ಹೇಗಿದೆ? ನಿಮ್ಮ ಹೊಟ್ಟೆ ಹೇಗಿದೆ? ನೀವು ನಮ್ಮ ಸ್ಥಳಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ. ಕೆವಿ ರಾಜು ತುಂಬಾ ಒಳ್ಳೆಯ ನಿರ್ದೇಶಕ. ನಮ್ಮ ಕಡೆಯಿಂದ ನಿಮಗೇನಾದರೂ ಸಮಸ್ಯೆಯಾಗುವುದಿದ್ದರೆ ನಾವು ಬೇರೆ ಸ್ಥಳಕ್ಕೆ ಶಿಫ್ಟ್ ಮಾಡುತ್ತೇವೆʼ ಎಂದಿ ವಿನಮ್ರ ಪೂರ್ವಕವಾಗಿ ಹೇಳಿರುವುದನ್ನು ದಯಾನಂದ್ ನೆನಪು ಮಾಡಿಕೊಳ್ಳುತ್ತಾರೆ.

 ಅಣ್ಣಾವ್ರ ವಿನಯಕ್ಕೆ ಮನಸೋತ ಅಮಿತಾಭ್‌, ಮರು ದಿನ ತಮ್ಮ ಎಲ್ಲಾ ಭದ್ರತೆಯೊಂದಿಗೆ ʼಪರಶುರಾಮʼ ಸಿನೆಮಾ ಸೆಟ್‌ಗೆ ಬಂದು ಭೇಟಿಯಾಗುತ್ತಾರೆ. ಆ ವೇಳೆ, ಎಲ್ಲರೂ ಜೊತೆಗೂಡಿ ಫೋಟೋ ತೆಗೆಸಿಕೊಂಡದ್ದನ್ನು ದಯಾನಂದ್‌ ಮೆಲುಕು ಹಾಕುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News