ಅಗತ್ಯವಿರುವ ಗ್ರಾಪಂಗಳಿಗೆ ಅದ್ಯತೆ ನೆಲೆಯಲ್ಲಿ ಅನುದಾನ ಹಂಚಿಕೆ: ಮಂಜುನಾಥ್ ಭಂಡಾರಿ
ಕುಂದಾಪುರ : ನಾನು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ೧೩ ವಿಧಾನಸಭಾ ಕ್ಷೇತ್ರ, ೨೬ ಬ್ಲಾಕ್‌ಗಳು, ೭೦-೮೦ ಜಿ.ಪಂ. ಕ್ಷೇತ್ರಗಳು ಬರುತ್ತವೆ. ಪರಿಷತ್ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾಪಂಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲು ಮುತುವರ್ಜಿ ವಹಿಸಲಾಗುವುದು. ಆದರೆ ಅನುದಾನದ ಅಗತ್ಯತೆ ಬಗ್ಗೆ ತಿಳಿಸುವ ಕಾರ್ಯ ಸ್ಥಳೀಯ ಜನಪ್ರತಿನಿಧಿ ಗಳು ಮಾಡಬೇಕಾಗಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ಗಂಗೊಳ್ಳಿ ಜಿಪಂ ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಭಾವನಾತ್ಮಕ ವಿಚಾರ ವನ್ನು ಮುಂದಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗರು ತಂತ್ರ ಹೂಡುವುದಲ್ಲದೆ ಜನರಲ್ಲಿ ಗೊಂದಲ ಮೂಡಿಸುವ ಅನೇಕ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಚಲಿತರಾಗದೇ, ಪಕ್ಷ ಸಂಘಟನೆ ಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಬಲವರ್ಧನೆಯಲ್ಲಿ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ವಹಿಸಿದ್ದರು. ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶನಿ ಒಲಿವೆರಾ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿ ಜಿಪಂ ವ್ಯಾಪ್ತಿಯ ಗುಜ್ಜಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು, ಹೊಸಾಡು, ಗಂಗೊಳ್ಳಿ ಹಾಗೂ ತ್ರಾಸಿ ಗ್ರಾ.ಪಂ. ಸದಸ್ಯರು, ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಕ್ಷದ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವಂದಿಸಿದರು.