ಪಾಕಿಸ್ತಾನಿ ಶಿಕ್ಷಣ ಸಂಸ್ಥೆಗಳಿಂದ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ: ಯುಜಿಸಿ, ಎಐಸಿಟಿಇ ಜಂಟಿ ಹೇಳಿಕೆ

Update: 2022-04-24 13:42 GMT

ಹೊಸದಿಲ್ಲಿ: ಪಾಕಿಸ್ತಾನಿ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿರುವ ಭಾರತೀಯ ಪ್ರಜೆಗಳು ಅಥವಾ ಸಾಗರೋತ್ತರ ಭಾರತೀಯ ನಾಗರಿಕರು ʼಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗವನ್ನು ಪಡೆಯಲು ಅರ್ಹರಾಗಿರುವುದಿಲ್ಲʼ ಎಂದು ಭಾರತದ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯು ಹೇಳಿದೆ.

ಶುಕ್ರವಾರ, ಯುಜಿಸಿ (University Grants Commission) ಮತ್ತು   ಎಐಸಿಟಿಇ (All India Council for Technical Education) ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸದಂತೆ ಭಾರತೀಯ ಪ್ರಜೆಗಳಿಗೆ ಜಂಟಿ ಸಾರ್ವಜನಿಕ ಸೂಚನೆ ನೀಡಿದೆ ಎಂದು thewire.com ವರದಿ ಮಾಡಿದೆ.

“ಉನ್ನತ ಶಿಕ್ಷಣವನ್ನು ಪಡೆಯಲು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಸಂಬಂಧಪಟ್ಟ ಎಲ್ಲರಿಗೂ ಸೂಚಿಸಲಾಗಿದೆ. ಪಾಕಿಸ್ತಾನದ ಯಾವುದೇ ಪದವಿ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಉದ್ದೇಶಿಸಿರುವ ಭಾರತೀಯ ಪ್ರಜೆ ಮತ್ತು ಸಾಗರೋತ್ತರ ಪ್ರಜೆಯು ಪಾಕಿಸ್ತಾನದಲ್ಲಿ ಪಡೆದ ಶೈಕ್ಷಣಿಕ ಅರ್ಹತೆಗಳ ಮೇಲೆ ಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗವನ್ನು ಪಡೆಯಲು ಅರ್ಹರಾಗಿರುವುದಿಲ್ಲ,” ಎಂದು ಅದು ಹೇಳಿದೆ.

ಆದರೆ, ಭಾರತದಲ್ಲಿ ಪೌರತ್ವವನ್ನು ಪಡೆದಿರುವ ಪಾಕಿಸ್ತಾನಿ ಪ್ರಜೆಗಳಿಗೆ ವಿನಾಯಿತಿ ನೀಡಲಾಗಿದೆ. "ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣ ಪದವಿ ಪಡೆದಿರುವ ಭಾರತದ ಪೌರತ್ವ ಹೊಂದಿರುವ ವಲಸಿಗರು ಅವರ ಮಕ್ಕಳು ಗೃಹ ಸಚಿವಾಲಯದಿಂದ ಭದ್ರತಾ ಕ್ಲಿಯರೆನ್ಸ್ ಪಡೆದ ಬಳಿಕ ಭಾರತದಲ್ಲಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ.

COVID-19 ಲಾಕ್‌ಡೌನ್ ಬಳಿಕ ಪಾಕಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದ ನಂತರ ವಾಘಾ ಗಡಿಯಿಂದ ಗಡಿದಾಟಲು ಜಮ್ಮು ಮತ್ತು ಕಾಶ್ಮೀರದ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಸೆಪ್ಟೆಂಬರ್ 2020 ರಲ್ಲಿ ವರದಿ ಮಾಡಿತ್ತು. 350 ವಿದ್ಯಾರ್ಥಿಗಳ ಪೈಕಿ ಕೇವಲ 200 ವಿದ್ಯಾರ್ಥಿಗಳು ಕೇವಲ ತಮ್ಮ ಅಂತಿಮ ಪರೀಕ್ಷೆಗೆ ಹಾಜರಾಗಲು ಮಾತ್ರ ಗಡಿ ದಾಟಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ 2019 ರಲ್ಲಿ, ಯುಜಿಸಿಯು ಪಾಕ್ ಆಕ್ರಮಿತ ಕಾಶ್ಮೀರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು.

"ಯುಜಿಸಿ ಮತ್ತು ಎಐಸಿಟಿಇ ದೇಶದ ಹೊರಗೆ ಉನ್ನತ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಸಾರ್ವಜನಿಕ ಸೂಚನೆಗಳನ್ನು ನೀಡುತ್ತವೆ" ಎಂದು ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ.

"ಇತ್ತೀಚಿನ ದಿನಗಳಲ್ಲಿ, ನಮ್ಮ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ವಿದೇಶಗಳಿಗೆ ಹಿಂತಿರುಗಲು ಸಾಧ್ಯವಾಗದ ಕಾರಣ ಅವರು ತೊಂದರೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ನಾವು ನೋಡಿದ್ದೇವೆ" ಎಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News