×
Ad

ಆಫ್ರಿಕನ್ ಹಂದಿ ಜ್ವರ ಪತ್ತೆ: ಹಂದಿಗಳ ಹತ್ಯೆ ಆರಂಭಿಸಿದ ತ್ರಿಪುರಾ ಸರಕಾರ

Update: 2022-04-24 20:59 IST

ಅಗರ್ತಲಾ(ತ್ರಿಪುರಾ), ಎ 24: ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್)ಪತ್ತೆಯಾದ ಬಳಿಕ ತ್ರಿಪುರಾ ಪ್ರಾಣಿ ಸಂಪನ್ಮೂಲ ಅಭಿವೃದ್ಧಿ (ಎಆರ್ಡಿ) ಇಲಾಖೆ ಸೆಪಾಹಿಜಾಲ ಜಿಲ್ಲೆಯ ಸರಕಾರಿ ಸ್ವಾಮಿತ್ವದ ದೇಬಿಪುರ ಫಾರ್ಮ್ ಹಾಗೂ ಸಮೀಪದ ಪ್ರದೇಶಗಳಲ್ಲಿ 165 ಹಂದಿ ಹಾಗೂ ಹಂದಿ ಮರಿಗಳನ್ನು ಹತ್ಯೆಗೈದಿದೆ.

 ದೇಬಿಪುರ ಫಾರ್ಮ್ ನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ಹಾಗೂ ಕೇಂದ್ರ ಸರಕರಾದ ಸೂಚನೆ ಬಳಿಕ ಶನಿವಾರ ಹತ್ಯೆ ಕಾರ್ಯಾಚರಣೆ ಆರಂಭಿಸಲಾಗಿದೆ.

ದೇಬಿಪುರ ಫಾರ್ಮ್ ನಲ್ಲಿ ಶನಿವಾರ 121 ಹಂದಿ ಹಾಗೂ ಹಂದಿ ಮರಿಗಳನ್ನು ಹತ್ಯೆಗೈಯಲಾಗಿದೆ. ಇದರ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಒಳಗೆ ಬರುವ ಪ್ರದೇಶಗಳಲ್ಲಿ 44 ಹಂದಿಗಳ ಕಳೇಬರವನ್ನು ವಿಲೇವಾರಿ ಮಾಡಲಾಗಿದೆ ಎಂದು ಎಆರ್ಡಿ ನಿರ್ದೇಶಕ ಡಿ.ಕೆ. ಚಕ್ಮಾ ಅವರು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಹತ್ಯೆ ಕಾರ್ಯಾಚರಣೆಯನ್ನು ಪಶು ವೈದ್ಯಾಧಿಕಾರಿಯ ಉಪಸ್ಥಿತಿಯಲ್ಲಿ ರವಿವಾರ ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಬಿಪುರ ಫಾರ್ಮ್ನಲ್ಲಿ ಎಪ್ರಿಲ್ 13ರಿಂದ ಕನಿಷ್ಠ 27 ಹಂದಿಗಳು ನಿಗೂಢವಾಗಿ ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆ ಇತ್ತೀಚೆಗೆ ಹಂದಿಗಳ ರಕ್ತದ ಮಾದರಿಗಳನ್ನು ಗುವಾಹತಿಯಲ್ಲಿರುವ ಈಶಾನ್ಯ ವಲಯ ರೋಗ ತಪಾಸಣಾ ಪ್ರಯೋಗಾಲಯ (ಎನ್ಇಆರ್ಡಿಇಎಲ್)ಕ್ಕೆ ಕಳುಹಿಸಿ ಕೊಟ್ಟಿತ್ತು. ಫಾರ್ಮ್ ನಿಂದ ಕಳುಹಿಸಲಾದ ರಕ್ತದ ಮಾದರಿಯಲ್ಲಿ ಆಫ್ರಿಕನ್ ಹಂದಿ ಜ್ವರದ ವೈರಾಣು ಇರುವುದನ್ನು ಪರೀಕ್ಷೆ ದೃಢಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಹಂದಿಗಳು ಹಾಗೂ ಹಂದಿ ಮರಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುವುದನ್ನು ತಡೆಯಲು ರಾಜ್ಯಾದ್ಯಂತ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಚಕ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News