ಶಿಕ್ಷಣ, ಆರ್ಥಿಕ ಸಂಘಟನೆಯಿಂದ ರಾಜಕೀಯ ಬಲ: ಸತ್ಯಜಿತ್ ಸುರತ್ಕಲ್
ಉಡುಪಿ : ಶ್ರೀನಾರಾಯಣಗುರುಗಳ ಹೇಳಿರುವ ಶಿಕ್ಷಣ, ಸಂಘಟನೆ ಮಹತ್ವ ಅರಿಯದೆ ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ನಾವು ಆರ್ಥಿಕವಾಗಿ ಸಧೃಡರಾಗಲು ಸಾಧ್ಯ. ಈ ಮೂಲಕ ಸಮುದಾಯಕ್ಕೆ ರಾಜಕೀಯವಾಗಿಯೂ ಬಲ ದೊರೆಯಲಿದೆ ಎಂದು ಶ್ರೀನಾರಾಯಣಗುರು ವಿಚಾರ ವೇದಿಕೆ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಉಡುಪಿ ಬನ್ನಂಜೆ ಬಿಲ್ಲವರ ಸೇವಾ ಸಂಘದ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ಶ್ರೀನಾರಾಯಣ ಗುರು ವಿಚಾರ ವೇದಿಕೆ ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ನಮ್ಮ ಸಮುದಾಯದ ಕೇಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಐಎಎಸ್, ಐಪಿಎಸ್‌ಗಳಾಗಿರುವುದು ಬೆರಳಣಿಕೆ ಸಂಖ್ಯೆಯಲ್ಲಿ ಮಾತ್ರ. ನಮ್ಮ ಸಮುದಾಯಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜಾತಿಗಳಿಗೆ ನಿಗಮ ಮಂಡಳಿ ನೀಡಿ ಅನುದಾನ ಒದಗಿಸಲಾಗಿದೆ. ಅದೇ ರೀತಿ ಬಲಿಷ್ಠ ಸಮುದಾಯಗಳಿಗೂ ಬಜೆಟ್‌ನಲ್ಲಿ ಕೋಟ್ಯಂತರ ಅನುದಾನ ನೀಡ ಲಾಗಿದೆ. ಆದರೆ ನಮ್ಮ ಸಮುದಾಯಕ್ಕೆ ಯಾವುದೇ ಅನುದಾನ ದೊರೆತಿಲ್ಲ ಎಂದು ಅವರು ತಿಳಿಸಿದರು.
ಬಂಗಾರಪ್ಪ ಅಗಲಿಕೆ ಹಾಗೂ ಜನಾರ್ದನ ಪೂಜಾರಿಯ ರಾಜಕೀಯ ಮೂಲೆ ಗುಂಪಿನ ಬಳಿಕ ನಮ್ಮ ಸಮುದಾಯ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕವಾಗಿಯೂ ಕುಸಿಯುತ್ತಿದೆ. ಕರಾವಳಿಯಲ್ಲಿ ಜನಸಂಖ್ಯೆ ಯಲ್ಲಿ ಮೊದಲ ಸ್ಥಾನದಲ್ಲಿರುವ ಬಿಲ್ಲವ ಸಮಾಜಕ್ಕೆ ಧಾರ್ಮಿಕ ಕ್ಷೇತ್ರದಲ್ಲೂ ಅಧಿಕಾರಿ ಸಿಕ್ಕಿಲ್ಲ ಮತ್ತು ಸಾಮಾಜಿಕ ಸ್ಥಾನಮಾನ ಕೂಡ ದೊರೆತಿಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಹಾಗೂ ವೇದಿಕೆಯ ರಾಜ್ಯ ಗೌರವ ಸಲಹೆಗಾರ ಬಿ.ಎನ್.ಶಂಕರ ಪೂಜಾರಿ ಮಾತನಾಡಿ, ನಮ್ಮ ಸಮುದಾಯದಲ್ಲಿ ಒಟ್ಟು ೨೬ ಉಪಪಂಗಡಗಳಿವೆ. ಸುಮಾರು ೬೦-೭೦ಲಕ್ಷ ಜನಸಂಖ್ಯೆ ಹೊಂದಿರುವ ನಾವು ರಾಜ್ಯದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದೇವೆ. ಆದರೆ ನಮಗೆ ದೊರೆಯಬೇಕಾದ ಸೌಲಭ್ಯಗಳು ದೊರೆತಿಲ್ಲ. ಇದಕ್ಕೆ ನಮ್ಮ ಜನಪ್ರತಿನಿಧಿಗಳು ಕೂಡ ಮುಖ್ಯ ಕಾರಣ ಎಂದು ದೂರಿದರು.
ಜಾತಿ ಆಧಾರದಲ್ಲಿ ಟಿಕೆಟ್ ಪಡೆಯುವ ನಮ್ಮ ಸಮುದಾಯದ ಜನಪ್ರತಿ ನಿಧಿಗಳು, ಜಯ ಗಳಿಸಿ ಬಂದ ಬಳಿಕ ನಮ್ಮ ಜಾತಿ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಇನ್ನು ನಾವು ನಮ್ಮ ಮಕ್ಕಳಿಗೆ ಶಿಕ್ಷಣ ಉದ್ಯೋಗ ಸೇರಿದಂತೆ ಸಮುದಾಯದ ಬೇಡಿಕೆಗಳಿಗಾಗಿ ಮನವಿ ಸಲ್ಲಿಸುವ ಬದಲು ಹೋರಾಟ ಮಾಡಬೇಕಾಗಿದೆ. ಆ ಮೂಲಕ ರಾಜಕಾರಣಿಗಳನ್ನೇ ಕಾಲ ಬುಡಕ್ಕೆ ಬರುವ ಸ್ಥಿತಿ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.
ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು, ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕಲ್ಯಾಣಪುರ, ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಶಶಿಧರ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ನಿಯೋಜಿತ ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ ಸ್ವಾಗತಿಸಿದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.
‘ಕೋಟಿ ಚೆನ್ನಯ್ಯ ನಾಮಕಾರಣಕ್ಕೆ ನಿರಾಸಕ್ತಿ’
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡುವಂತೆ ಕೇಳಿ ಎರಡು ಮೂರು ವರ್ಷಗಳು ಕಳೆದವು. ಈ ಕುರಿತು ಗ್ರಾಪಂ, ಜಿಪಂ ನಿರ್ಣಯವಾಗಿ ಇದೀಗ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೊಳೆಯುತ್ತಿದೆ ಎಂದು ಅವರು ಆರೋಪಿಸಿದರು.
ಶಿವಮೊಗ್ಗ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರು ಇಡುವಂತೆ ಕೇಳಿಕೊಂಡಿದ್ದೇವು. ಆದರೆ ರಾಜಕೀಯ ಕಾರಣಕ್ಕಾಗಿ ಲಿಂಗಾಯುತ ಸಮುದಾಯದ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಿ ತೀರ್ಮಾನ ತೆಗೆದುಕೊಂಡಿದೆ. ನಮ್ಮ ಸಮುದಾಯ ಒಗ್ಗಟ್ಟಾಗದೆ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.