ಫ್ರಾನ್ಸ್ ಅಧ್ಯಕ್ಷರಾಗಿ ಇಮ್ಯಾನುವೆಲ್ ಮಾಕ್ರನ್ ಪುನರಾಯ್ಕೆ

Update: 2022-04-25 18:36 GMT

ಪ್ಯಾರಿಸ್, ಎ.25: ಫ್ರಾನ್ಸ್ ನ ಅಧ್ಯಕ್ಷರಾಗಿ ಇಮ್ಯಾನುವೆಲ್ ಮಾಕ್ರನ್ ಮತ್ತೊಂದು ಅವಧಿಗೆ ಪುನರಾಯ್ಕೆಯಾಗುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. 1958ರ ಬಳಿಕ ಇದೇ ಮೊದಲ ಬಾರಿಗೆ ಫ್ರಾನ್ಸ್ನಲ್ಲಿ ಹಾಲಿ ಅಧ್ಯಕ್ಷರು ಮತ್ತೊಂದು ಅವಧಿಗೆ ಪುನರಾಯ್ಕೆಗೊಂಡಂತಾಗಿದೆ.
 ರವಿವಾರ ನಡೆದ 2ನೇ ಹಂತದ ಮತದಾನದಲ್ಲಿ 44 ವರ್ಷದ ಮಾಕ್ರನ್ 58.55% ಮತ ಗಳಿಸಿದ್ದು ಅವರ ಪ್ರತಿಸ್ಪರ್ಧಿ, ಕಟ್ಟಾ ಬಲಪಂಥೀಯ ನಾಯಕಿ ಲೆ ಪೆನ್ 41.5% ಮತ ಗಳಿಸಲಷ್ಟೇ ಶಕ್ತವಾಗಿದ್ದಾರೆ ಎಂದು ಫಲಿತಾಂಶ ಘೋಷಿಸಿದ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ವಿಜಯೋತ್ಸವ ಭಾಷಣ ಮಾಡಿದ ಮಾಕ್ರನ್ ‘ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಹೆಮ್ಮೆಯೆನಿಸುತ್ತದೆ. ನನ್ನ ಸಿದ್ಧಾಂತವನ್ನು ಬೆಂಬಲಿಸದಿದ್ದರೂ ಕಟ್ಟಾ ಬಲಪಂಥೀಯರನ್ನು ತಡೆಯುವ ಉದ್ದೇಶದಿಂದ ನನಗೆ ಮತ ಚಲಾಯಿಸಿದವರಿಗೆ ಅಭಿನಂದನೆಗಳು. ಈಗಿನಿಂದ ನಾನು ಯಾವುದೇ ಪಕ್ಷದ ಅಭ್ಯರ್ಥಿಯಲ್ಲ, ಎಲ್ಲರ ಅಧ್ಯಕ್ಷ. ಯಾರನ್ನೂ ರಸ್ತೆ ಬದಿ ಬಿಟ್ಟು ತೆರಳುವುದಿಲ್ಲ’ ಎಂದರು.

ಯುರೋಪಿಯನ್ ಯೂನಿಯನ್ನ ಏಕೀಕರಣಕ್ಕೆ ಕಾರ್ಯನಿರ್ವಹಿಸುವುದಾಗಿ ಚುನಾವಣೆ ಪ್ರಚಾರ ಸಂದರ್ಭ ಮಾಕ್ರನ್ ಹೇಳಿದ್ದರು. ಇದೀಗ ಅವರು ಗೆದ್ದಿರುವುದರಿಂದ ಫಾನ್ಸ್ನಲ್ಲಿ ಹೂಡಿಕೆ ಮಾಡಿರುವವರು ನಿರಾಳವಾದಂತಾಗಿದೆ. ಅವರ ಪ್ರತಿಸ್ಪರ್ಧಿ ಲೆ ಪೆನ್ ರಶ್ಯ ಅಧ್ಯಕ್ಷ ಪುಟಿನ್ರನ್ನು ಶ್ಲಾಘಿಸಿದ್ದ ಹೇಳಿಕೆಯನ್ನೇ ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಪ್ರಧಾನ ಅಸ್ತ್ರವನ್ನಾಗಿ ಮಾಕ್ರನ್ ಬಳಸಿ ಯಶಸ್ವಿಯಾಗಿದ್ದಾರೆ. ಮಾಕ್ರನ್ ಅವರನ್ನು ಅಮೆರಿಕ ಅಧ್ಯಕ್ಷ ಬೈಡನ್, ರಶ್ಯ ಅಧ್ಯಕ್ಷ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿತ ವಿಶ್ವದ ಮುಖಂಡರು ಅಭಿನಂದಿಸಿದ್ದಾರೆ.
ಸೋಲೊಪ್ಪಿಕೊಂಡಿರುವ ಲೆ ಪೆನ್, ತಾನು ಫ್ರಾನ್ಸ್ ಬಿಟ್ಟು ತೆರಳುವುದಿಲ್ಲ, ಜೂನ್ನಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
 ಈ ಫಲಿತಾಂಶ ನಮಗೆ ಕೂಡಾ ಗಮನಾರ್ಹ ಗೆಲುವಾಗಿದೆ. ನಮ್ಮ ದೇಶವನ್ನು ವಿಭಜಿಸುವ ಮತ್ತು ನಮ್ಮ ದೇಶವಾಸಿಗಳಿಗೆ ಸಮಸ್ಯೆಯಾಗುವ ಒಡಕುಗಳನ್ನು ಸರಿಪಡಿಸಲು ಮಾಕ್ರನ್ ಏನನ್ನೂ ಮಾಡುವುದಿಲ್ಲ. ಮುಂದಿನ 5 ವರ್ಷದ ಅವಧಿಯೂ ಈ ಹಿಂದಿನ ಕ್ರೂರ ವಿಧಾನಗಳಿಗಿಂತ ಭಿನ್ನವಾಗಿರದು. ಕೆಲವರಲ್ಲಿ ಅಧಿಕಾರದ ಏಕಸ್ವಾಮ್ಯ ಕೇಂದ್ರೀಕೃತವಾಗುವುದನ್ನು ತಪ್ಪಿಸಲು ಮತ್ತು ಫ್ರಾನ್ಸ್ ಹಾಗೂ ಫ್ರಾನ್ಸ್ನ ಜನತೆಯ ಹಿತಾಸಕ್ತಿಗೆ ಪೂರಕವಾಗಿ ನನ್ನ ಹೋರಾಟ ಮುಂದುವರಿಯಲಿದೆ ಎಂದು ಲೆ ಪೆನ್ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.


 ಮಾಕ್ರನ್ ಆಯ್ಕೆ ವಿರೋಧಿಸಿ ಪ್ರತಿಭಟನೆ 

ಇಮ್ಯಾನುವೆಲ್ ಮಾಕ್ರನ್ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ದೇಶದ ವಿವಿಧೆಡೆ ನಡೆದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಎಂದು ವರದಿಯಾಗಿದೆ.
  
ಉತ್ತಮ ಅಂತರದಿಂದ ಮಾಕ್ರನ್ ಗೆಲುವು ಸಾಧಿಸಿದ್ದರೂ, ಈ ಬಾರಿ ಮತದಾನಕ್ಕೆ ಹಾಜರಾಗದವರ ಸಂಖ್ಯೆ ಅತ್ಯಧಿಕವಾಗಿದೆ. ಮಾಕ್ರನ್ ಅಥವಾ ಎದುರಾಳಿ ಲೆ ಪೆನ್ಗೆ ಮತ ಚಲಾಯಿಸಲು ಬಯಸದ ಮತದಾರರ ಪ್ರಮಾಣ ಹೆಚ್ಚಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೇಂದ್ರ ಪ್ಯಾರಿಸ್ನ ನೆರೆಯ ನಗರ ಚಾಟೆಲೆಟ್ನಲ್ಲಿ ಗುಂಪು ಸೇರಿದ ಪ್ರತಿಭಟನಾಕಾರರಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರಥಮ ಹಂತ ಮತ್ತು ದ್ವಿತೀಯ ಹಂತದ ಮತದಾನದ ಸಂದರ್ಭವೂ ವಿದ್ಯಾರ್ಥಿಗಳು ತಮಗೆ ಮತಚಲಾಯಿಸಲು ಹೆಚ್ಚಿನ ಆಯ್ಕೆ ಇರಲಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News