ರಾಮಮಂದಿರ ನಿರ್ಮಾಣದ ನಿರ್ಧಾರ ನ್ಯಾಯಾಲಯದ್ದು, ಅದರ ಹೆಸರಲ್ಲಿ ಜೋಳಿಗೆ ಹಿಡಿದದ್ದು ಮಾತ್ರ ಬಿಜೆಪಿ: ಶಿವಸೇನೆ

Update: 2022-04-26 08:34 GMT

ಮುಂಬೈ: ಹಿಂದುತ್ವಕ್ಕಾಗಿ ಬಿಜೆಪಿ ಏನು ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಪ್ರಶ್ನಿಸಿರವುದಾಗಿ ndtv.com ವರದಿ ಮಾಡಿದೆ. ಶಿವಸೇನೆ ತನ್ನ ಸೈದ್ಧಾಂತಿಕ ಬೇರುಗಳನ್ನು ಮರೆತಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ, ಹಿಂದುತ್ವಕ್ಕಾಗಿ ಬಿಜೆಪಿಯ ಕೊಡುಗೆಯನ್ನು ಠಾಕ್ರೆ ಪ್ರಶ್ನಿಸಿದ್ದಾರೆ 

“ನಾವು ಬೇಕೆಂದಾಗ ಹಾಕಲು, ಬೇಡವಾದಾಗ ತೆಗೆಯಲು ಹಿಂದುತ್ವ ಏನು ಧೋತಿಯೇ?” ಎಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಠಾಕ್ರೆ ಪ್ರಶ್ನಿಸಿದ್ದಾರೆ. “ರಾಮಮಂದಿರ ನಿರ್ಮಾಣದ ನಿರ್ಧಾರ ನಿಮ್ಮ ಸರ್ಕಾರದ್ದಲ್ಲ, ನ್ಯಾಯಾಲಯ ನೀಡಿದ ಬಂದಿದೆ. ಆದರೆ, ಅದರ ನಿರ್ಮಾಣವನ್ನು ಮುಂದಿಟ್ಟುಕೊಂಡು ನೀವು ಜೋಳಿಗೆಯೊಂದಿಗೆ ಜನರ ಬಳಿಗೆ ಹೋಗಿದ್ದೀರಿ. ಎಲ್ಲಿದೆ ನಿಮ್ಮ ಹಿಂದುತ್ವ?” ಎಂದು ಅವರು ಕೇಳಿದ್ದಾರೆ. 

 
ಕಳೆದ ವಾರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಮಸೀದಿಯ ಲೌಡ್‌ ಸ್ಪೀಕರ್‌ ಅನ್ನು ತೆಗೆಸಲು ಬೇಕಾಗಿ, ತಮ್ಮ ಪಕ್ಷದ ಸದಸ್ಯರಿಗೆ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ಕರೆ ನೀಡಿದ ನಂತರ ಶಿವಸೇನೆ ಮತ್ತು ಬಿಜೆಪಿ ನಾಯಕರು ಪರಸ್ಪರರು ವಾಗ್ದಾಳಿಯಲ್ಲಿ ತೊಡಗಿದ್ದಾರೆ.   

ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರು ಠಾಕ್ರೆ ಮನೆಯ ಹೊರಗೆ ಹನುಮಾನ್‌ ಚಾಲಿಸಾ ಪಠಿಸುವುದಾಗಿ ಬೆದರಿಕೆ ಹಾಕುವ ಮೂಲಕ ವಿವಾದವನ್ನು ಹೆಚ್ಚಿಸಿದ್ದರು. ಈ ದಂಪತಿಯನ್ನು ಏಪ್ರಿಲ್ 24 ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
 
ಬಿಜೆಪಿ ನಾಯಕರು (ಠಾಕ್ರೆ ನಿವಾಸದಲ್ಲಿ) ಹನುಮಾನ್ ಚಾಲೀಸಾವನ್ನು ಪಠಿಸಲು ಬಯಸಿದರೆ, ಅವರಿಗೆ ಸ್ವಾಗತವಿದೆ, ಆದರೆ ಸರಿಯಾದ ಕ್ರಮದಲ್ಲಿ ತಮ್ಮನ್ನು ಸಂಪರ್ಕಿಸಬೇಕು ಎಂದು ಠಾಕ್ರೆ ಹೇಳಿದ್ದಾರೆ. 

"ಆದರೆ ನೀವು ಗೂಂಡಾಗಿರಿ ಭೇಟಿ ಮಾಡಲು ಬಯಸಿದರೆ, ಬಾಳಾ ಸಾಹೇಬ್ ಠಾಕ್ರೆ ಆ ಗೂಂಡಾಗಿರಿಯನ್ನು ಹೇಗೆ ಒಡೆಯಬೇಕು ಎಂದು ನಮಗೆ ಕಲಿಸಿದ್ದಾರೆ” ಎಂದು ಠಾಕ್ರೆ ಎಚ್ಚರಿಸಿದ್ದಾರೆ.

ಸೋಮವಾರ, ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯವು ಮಹಾರಾಷ್ಟ್ರದಲ್ಲಿ ಠಾಕ್ರೆ ಆಳ್ವಿಕೆಯಲ್ಲಿ ಹಿಂದುತ್ವ ಪ್ರಬಲವಾಗಿದೆ ಎಂದು ಹೇಳಿತ್ತು.

"ರಾಜ್ಯದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಯಾವುದೇ ನಿಷೇಧವಿಲ್ಲ, ಹಾಗಾದರೆ ಠಾಕ್ರೆ ಕುಟುಂಬದ ನಿವಾಸದೆದುರು ಹನುಮಾನ್‌ ಚಾಲಿಸಾವನ್ನು ಪಠಿಸಲು ಯಾಕೆ ಒತ್ತಾಯಪಡಿಸಲಾಗುತ್ತದೆ" ಎಂದು ಸಂಪಾದಕೀಯ ಪ್ರಶ್ನಿಸಿದೆ. 

ರಾಣಾ ದಂಪತಿ ಹನುಮಾನ್‌ ಚಾಲಿಸಾ ಪಠಣದ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದರೆ, ಅವರು ಅದನ್ನು ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆಗಳ ಹೊರಗೆ ಮಾಡಬಹುದಿತ್ತು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News