ಧರ್ಮಸಂಸದ್‌ನಲ್ಲಿ ದ್ವೇಷಭಾಷಣ ಮಾಡುವುದಿಲ್ಲವೆಂದು ಖಚಿತಪಡಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ತಾಕೀತು

Update: 2022-04-26 16:30 GMT

ಹೊಸದಿಲ್ಲಿ,ಎ.26: ರೂರ್ಕಿಯಲ್ಲಿ ಆಯೋಜಿಸಲಾಗಿರುವ ಧರ್ಮ ಸಂಸದ್ ಕುರಿತು ಮಂಗಳವಾರ ಉತ್ತರಾಖಂಡ ಸರಕಾರವನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಈ ಸಂಬಂಧ ತೆಗೆದುಕೊಳ್ಳಲಾಗುತ್ತಿರುವ ಮುನ್ನೆಚ್ಚರಿಕೆ ಮತ್ತು ಪರಿಹಾರಕ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿತು.

ಈಗಾಗಲೇ ಪ್ರಕಟಣೆಯನ್ನು ಮಾಡಲಾಗಿದ್ದರೆ ನೀವು ಕ್ರಮವನ್ನು ಕೈಗೊಳ್ಳಲೇಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಂತೆ ಕ್ರಮವನ್ನು ಕೈಗೊಳ್ಳುವುದಷ್ಟೇ ನಿಮ್ಮ ಕೆಲಸ ಎಂದು ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠವು ಉತ್ತರಾಖಂಡ ಸರಕಾರದ ಪರವಾಗಿ ಹಾಜರಾಗಿದ್ದ ವಕೀಲರಿಗೆ ತಿಳಿಸಿತು.

ಭಾಷಣಕಾರರು ಏನು ಮಾತನಾಡಲಿದ್ದಾರೆ ಎನ್ನುವುದು ಗೊತ್ತಿಲ್ಲ,ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸಮಸ್ಯೆಯಾಗಿದೆ ಎಂದು ರಾಜ್ಯವು ತಿಳಿಸಿದಾಗ ಪೀಠವು,‘ಅದೇ ಹಿಂದಿನ ಭಾಷಣಕಾರರಾಗಿದ್ದರೆ ನೀವು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕು. ದಯವಿಟ್ಟು ಅರ್ಥ ಮಾಡಿಕೊಳ್ಳಿ,ನಾವು ಏನಾದರೂ ಹೇಳುವಂತೆ ಮಾಡಬೇಡಿ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಇತರ ವಿಧಾನಗಳೂ ಇವೆ ಮತ್ತು ಅದನ್ನು ಹೇಗೆ ಮಾಡಬೇಕು ಎನ್ನುವುದು ನಿಮಗೆ ತಿಳಿದಿದೆ ’ಎಂದು ಪ್ರತಿಕ್ರಿಯಿಸಿತು. ಏನಾದರೂ ಸಂಭವಿಸಿದರೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸುವುದಾಗಿಯೂ ನ್ಯಾಯಾಲಯವು ಖಡಕ್ಕಾಗಿ ತಿಳಿಸಿತು.

ಹಿಮಾಚಲ ಪ್ರದೇಶದಲ್ಲಿ ನಡೆದಿದ್ದ ಧರ್ಮ ಸಂಸದ್ ವಿರುದ್ಧ ಅರ್ಜಿಯೊಂದರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಕಾರ್ಯಕ್ರಮವನ್ನು ತಡೆಯಲು ಮತ್ತು ನಂತರ ತೆಗೆದುಕೊಳ್ಳಲಾಗಿದ್ದ ಕ್ರಮಗಳನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯದ ಪರ ವಕೀಲರಿಗೆ ಸೂಚಿಸಿತು.

ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿವೆ ಮತ್ತು ಸರಕಾರವು ಕೇವಲ ಅವುಗಳನ್ನು ಅನುಷ್ಠಾನಿಸುವ ಅಗತ್ಯವಿದೆ ಎಂದು ಹಿಮಾಚಲ ಪ್ರದೇಶ ಪರ ವಕೀಲರಿಗೆ ತಿಳಿಸಿದ ಪೀಠವು,ಈಗಾಗಲೇ ಇರುವ ಮಾರ್ಗಸೂಚಿಗಳನ್ನೂ ನೀವು ಅನುಸರಿಸಬೇಕು ಅಷ್ಟೇ. ನೀವು ಅದನ್ನು ಪಾಲಿಸುತ್ತೀರೋ ಇಲ್ಲವೋ ಎಂಬ ಬಗ್ಗೆ ನೀವು ನಮಗೆ ಉತ್ತರಿಸಬೇಕು. ಪಾಲನೆಯ ಬಳಿಕವೂ ಅಹಿತಕರ ಘಟನೆಗಳು ನಡೆದರೆ ನೀವು ಪರಿಹಾರಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿತು.

ತಾನು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೆ ಮತ್ತು ಹಿಂದೆ ಸಂಭವಿಸಿದ್ದ ಇಂತಹುದೇ ಘಟನೆಗಳ ಬಗ್ಗೆ ತನಿಖೆ ನಡೆಸಿದ್ದೆ ಎಂದು ರಾಜ್ಯವು ತಿಳಿಸಿದಾಗ,ತನಿಖೆ ಮಾತ್ರವಲ್ಲ,ನೀವು ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ನ್ಯಾ.ಖನ್ವಿಲ್ಕರ್ ಹೇಳಿದರು.
ಇಂತಹ ಯಾವುದೇ ಸಮಸ್ಯೆಗಳು ಉಂಟಾಗದಿರುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ಪೊಲೀಸ್ ಕಾಯ್ದೆಯಡಿ ನೋಟಿಸನ್ನು ಹೊರಡಿಸಿತ್ತು. ಬಳಿಕ ಅಹವಾಲೊಂದು ಸಲ್ಲಿಕೆಯಾದಾಗ ಕ್ರಮವನ್ನೂ ತೆಗೆದುಕೊಂಡಿತ್ತು ಎಂದು ಹಿಮಾಚಲ ಪ್ರದೇಶದ ಪರ ವಕೀಲರು ತಿಳಿಸಿದರು.

ಇಂತಹ ಕಾರ್ಯಕ್ರಮಗಳು ದಿಢೀರಾಗಿ,ರಾತ್ರೋರಾತ್ರಿ ನಡೆಯುವುದಿಲ್ಲ. ಅವುಗಳ ಬಗ್ಗೆ ಸಾಕಷ್ಟು ಮೊದಲೇ ಪ್ರಕಟಿಸಲಾಗುತ್ತದೆ. ಅಹಿತಕರ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳಲು ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಅಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎನ್ನುವುದನ್ನು ನೀವು ವಿವರಿಸಬೇಕು ಎಂದು ನ್ಯಾ.ಖನ್ವಿಲ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News