ತೀರಾ ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಬಾರದು: ಸುಪ್ರೀಂ ಕೋರ್ಟ್‌

Update: 2022-04-26 11:57 GMT

ಹೊಸದಿಲ್ಲಿ: ಮಕ್ಕಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅವರನ್ನು ತೀರಾ ಸಣ್ಣ ವಯಸ್ಸಿನಲ್ಲಿಯೇ ಶಾಲೆಗಳಿಗೆ ಕಳುಹಿಸಬಾರದು ಎಂದು ಸುಪ್ರೀಂ ಕೋರ್ಟ್‌ ಇಂದು ಅಭಿಪ್ರಾಯ ಪಟ್ಟಿದೆ.

ʻʻಮಕ್ಕಳನ್ನು ಎರಡು ವರ್ಷದವರಿರುವಾಗಲೇ ಶಾಲೆಗೆ ಕಳುಹಿಸುವ ಆತುರ ಹೆತ್ತವರಲ್ಲಿದೆ. ಇದು ಅವರ ಮಾನಸಿಕ ಆರೋಗ್ಯಕ್ಕೆ ಉತ್ತಮವಲ್ಲ,ʼʼ ಎಂದು ಜಸ್ಟಿಸ್‌ ಸಂಜಯ್‌ ಕಿಶನ್‌ ಮತ್ತು ಜಸ್ಟಿಸ್‌ ಎಂ ಎಂ ಸುಂದರೇಶ್‌ ಅವರ ಪೀಠ ಹೇಳಿದೆ.

ಮುಂಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಬೇಕಾದರೆ ಅವರಿಗೆ ಆರು ವರ್ಷ ತುಂಬಿರಬೇಕು ಎಂದು ಕೇಂದ್ರೀಯ ವಿದ್ಯಾಲಯ ಹೊರತಂದಿರುವ ನಿಯಮವನ್ನು ಪ್ರಶ್ನಿಸಿ ಹೆತ್ತವರ ಗುಂಪೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಎಪ್ರಿಲ್‌ 11ರ ದಿಲ್ಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿದ ಅರ್ಜಿದಾರರು, ಮಾರ್ಚ್‌ 2022ರಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲು ನಾಲ್ಕು ದಿನಗಳಿವೆ ಎನ್ನುವಾಗ ಪ್ರವೇಶಾತಿ ನಿಯಮಗಳನ್ನು ಕೇಂದ್ರೀಯ ವಿದ್ಯಾಲಯ ಸಂಘಟನ್‌ ಏಕಾಏಕಿ ಬದಲಾಯಿಸಿತ್ತು ಎಂದು ಅವರು ಹೇಳಿದ್ದಾರೆ. ಇದಕ್ಕೂ ಹಿಂದಿನ ನಿಯಮದಂತೆ ಐದು ವರ್ಷ ತುಂಬಿದ ಮಕ್ಕಳು ಒಂದನೇ ತರಗತಿಗೆ ದಾಖಲಾತಿ ಪಡೆಯಬಹುದಾಗಿತ್ತು.

ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ʻʻಮಗುವೊಂದನ್ನು ಶಾಲೆಗೆ ಸೇರಿಸುವ ಸರಿಯಾದ ವಯಸ್ಸು ಇದೆ ಎಂಬುದಕ್ಕೆ ಪುರಾವೆಯಾಗಿ ಅಧ್ಯಯನಗಳು ಇವೆ. ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬೇಡಿ, ಇದು ಅವರ ವಿಷಯ ಗ್ರಹಣೆ ಮತ್ತು ಓದುವ ಶಕ್ತಿಯನ್ನು ಬಾಧಿಸಬಹುದು,ʼʼ ಎಂದು ಹೇಳಿದೆ.

ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಕೇಂದ್ರ ಸರಕಾರದ ಪರ ವಕೀಲರು ತಮ್ಮ ವಾದ ಮಂಡಿಸುತ್ತಾ, ರಾಷ್ಟ್ರೀಯ ಶಿಕ್ಷಣ ನೀತಿಯಾನುಸಾರ ಒಂದನೇ ತರಗತಿಗೆ ಪ್ರವೇಶಕ್ಕೆ ಆರು ವರ್ಷ ವಯೋಮಿತಿಯನ್ನು 21 ರಾಜ್ಯಗಳು ನಿರ್ಧರಿಸಿವೆ ಎಂದು ಹೇಳಿದರು.

ಎರಡೂ ಕಡೆಗಳ ವಾದ ಆಲಿಸಿದ ನ್ಯಾಯಾಲಯ, ಹೆತ್ತವರ ವಾದವನ್ನು ತಿರಸ್ಕರಿಸಿ ಎಪ್ರಿಲ್‌ 11ರಂದು ದಿಲ್ಲಿ ಹೈಕೋರ್ಟ್‌ ಈ ಕುರಿತು ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News