ಪಕ್ಷ ಸೇರುವಂತೆ ಕಾಂಗ್ರೆಸ್‌ ನೀಡಿದ ಆಹ್ವಾನ ತಿರಸ್ಕರಿಸಿದ ಪ್ರಶಾಂತ್ ಕಿಶೋರ್‌

Update: 2022-04-26 11:26 GMT
ಪ್ರಶಾಂತ್ ಕಿಶೋರ್‌ (PTI)

ಹೊಸದಿಲ್ಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರು ಪಕ್ಷ ಸೇರುವಂತೆ ಕಾಂಗ್ರೆಸ್‌ ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಉನ್ನತಾಧಿಕಾರ ಕ್ರಿಯಾ ಗುಂಪಿಗೆ ಸೇರುವಂತೆ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆಗಾಗಿ 137 ವಷದ ಇತಿಹಾಸವುಳ್ಳ ಪಕ್ಷಕ್ಕೆ ಪುನಶ್ಚೇತನ ನೀಡಲು  ಕಾಂಗ್ರೆಸ್‌ ಪಕ್ಷ ಪ್ರಶಾಂತ್‌ ಕಿಶೋರ್‌ ಅವರನ್ನು ಆಹ್ವಾನಿಸಿತ್ತು. ಆದರೆ ಈ ಕಾರ್ಯ ಸಾಧಿಸಲು ಪ್ರಶಾಂತ್‌ ಕಿಶೋರ್‌ ಅವರಿಗೆ ಮುಕ್ತಾವಕಾಶ ನೀಡಬೇಕೆಂಬ ಕೋರಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್‌ ಅದೇ ಸಮಯ ಪಕ್ಷಕ್ಕೆ ಮುಂದಿನ ಚುನಾವಣೆ ಎದುರಿಸಲು ಹೊಸ ತಂತ್ರಗಾರಿಕೆ ಹಾಗೂ ಹೊಸ ಮುಖ ಬೇಕೆಂಬುದನ್ನು ಒಪ್ಪಿಕೊಂಡಿದೆ.

ʻʻಕಾಂಗ್ರೆಸ್‌ ಮಾಡಿದ ಆಫರ್‌ ಅನ್ನು ನಾನು ನಿರಾಕರಿಸಿದ್ದೇನೆ. ನನ್ನ ಅಭಿಪ್ರಾಯದಂತೆ ನನಗಿಂತ ಹೆಚ್ಚಾಗಿ ಪಕ್ಷಕ್ಕೆ ಉತ್ತಮ ನಾಯಕತ್ವ ಬೇಕಿದೆ ಮತ್ತು ಅಮೂಲಾಗ್ರ ಬದಲಾವಣೆಗಳನ್ನು ತರಲು ಸರ್ವರ ಪರಿಶ್ರಮ ಮತ್ತು ಬದ್ಧತೆಯ ಅಗತ್ಯವಿದೆ,‌ʼʼ ಎಂದು ಪ್ರಶಾಂತ್‌ ಕಿಶೋರ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುಂಚೆ ಪಕ್ಷದ ಹಿರಿಯ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಟ್ವೀಟ್‌ ಮಾಡಿ ʻʻಪ್ರಶಾಂತ್‌ ಕಿಶೋರ್‌ ಅವರ ಜೊತೆಗೆ ಚರ್ಚೆಗಳ ನಂತರ ಕಾಂಗ್ರೆಸ್‌ ಅಧ್ಯಕ್ಷೆ  ಉನ್ನತಾಧಿಕಾರ ಕ್ರಿಯಾ ಗುಂಪು 2024 ಅನ್ನು ರಚಿಸಿ ಪಕ್ಷ ಸೇರುವಂತೆ ಪ್ರಶಾಂತ್‌ ಕಿಶೋರ್‌ ಅವರಿಗೆ ಆಫರ್‌ ಮಾಡಿದ್ದರೂ ಅವರು ನಿರಾಕರಿಸಿದ್ದಾರೆ. ಪಕ್ಷಕ್ಕೆ ಅವರು ನೀಡಿದ ಸಲಹೆಗಳನ್ನು ನಾವು ಶ್ಲಾಘಿಸುತ್ತೇವೆ,ʼʼಎಂದು ಅವರು ಬರೆದಿದ್ದಾರೆ.

ಪ್ರಶಾಂತ್‌ ಕಿಶೋರ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವೆ ಹಲವಾರು ಸುತ್ತಿನ ಮಾತುಕತೆ ಹಾಗೂ ಕಾಂಗ್ರೆಸ್‌ ಪಕ್ಷದ ಆಂತರಿಕ ಸಭೆಗಳ ನಂತರ ಮಾತುಕತೆಗಳು ಮುರಿದು ಬಿದ್ದವು. ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ನ ಎದುರಾಳಿ ಪಕ್ಷಗಳಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಜತೆಗೆ ಹೊಂದಿರುವ ನಂಟಿನ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಲವು ನಾಯಕರಿಂದ ವಿರೋಧ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News