ನಾನು ಪಕ್ಷದಲ್ಲಿಯೇ ಇರುವಂತೆ ಮಾಡಲು ಒಂದು ದಾರಿ ಹುಡುಕಿ": ಕಾಂಗ್ರೆಸ್‌ ಹೈಕಮಾಂಡ್‌ಗೆ ಹಾರ್ದಿಕ್‌ ಮನವಿ

Update: 2022-04-26 12:41 GMT

ಅಹ್ಮದಾಬಾದ್:‌ ಗುಜರಾತ್‌ ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದರ ಸೂಚನೆಯೆಂಬಂತೆ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್‌ ಅವರು  ಹೈಕಮಾಂಡ್‌ಗೆ ಒಂದು ಸಂದೇಶ ಕಳುಹಿಸಿದ್ದಾರಲ್ಲದೆ ನಾನು ಪಕ್ಷದಲ್ಲಿಯೇ ಉಳಿಯಲು ದಾರಿ ಹುಡುಕಿ ಎಂದು ಕೋರಿದ್ದಾರೆ.

ʻʻನಾನು ಪ್ರಸ್ತುತ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ನಾನು ಈ ಪಕ್ಷದಲ್ಲಿಯೇ ಉಳಿಯುವಂತಾಗಲು ಕೇಂದ್ರ ನಾಯಕರು ಒಂದು ದಾರಿ ಹುಡುಕುತ್ತಾರೆ ಎಂದು ಅಂದುಕೊಂಡಿದ್ದೇನೆ. ನಾನು ಕಾಂಗ್ರೆಸ್‌ ತ್ಯಜಿಸಬೇಕೆಂದು ಬಯಸುವ ಹಲವರು ಇದ್ದಾರೆ. ಅವರು ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ,ʼʼಎಂದು ಹೈಕಮಾಂಡ್‌ಗೆ ಮಾಡಿರುವ ಅಪೀಲಿನಲ್ಲಿ ಹಾರ್ದಿಕ್‌ ಹೇಳಿದ್ದಾರೆ.

ಪಟಿದಾರ್‌ ಮೀಸಲಾತಿ ಆಂದೋಲನದ ಮೂಲಕ ಜನಪ್ರಿಯತೆ ಪಡೆದಿದ್ದ ಹಾರ್ದಿಕ್‌ ಆವರು 2017ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ ಸೇರಿದ್ದರು. ಇದೀಗ ಗುಜರಾತ್‌ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿಯಿವೆ ಎನ್ನುವಾಗ ಹಾರ್ದಿಕ್‌ ಅವರ ಈ ಮಾತುಗಳು ಪಕ್ಷಕ್ಕೆ ಮತ್ತೆ ಸಂಕಷ್ಟ ಎದುರಾಗುವ ಸೂಚನೆಯನ್ನು ನೀಡುತ್ತಿವೆ.

ಪಕ್ಷ ನಾಯಕರು ತಮ್ಮನ್ನು ಬದಿಗೆ ತಳ್ಳುತ್ತಿದ್ದಾರೆ ಎಂಬ ಆರೋಪವನ್ನೂ ಹಾರ್ದಿಕ್‌ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಘಟಕದ ಯಾವುದೇ ಸಭೆಗೆ ತಮ್ಮನ್ನು ಆಹ್ವಾನಿಸಲಾಗುತ್ತಿಲ್ಲ ಹಾಗೂ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಗುತ್ತಿಲ್ಲ ʻʻನನ್ನ ಸ್ಥಿತಿ ಹೇಗಿದೆಯೆಂದರೆ ನಸ್ಬಂದಿ (ವಾಸೆಕ್ಟಮಿ) ಮಾಡಿಸಲ್ಪಟ್ಟ ಹೊಸ ಮದುಮಗನಂತಾಗಿದೆ,ʼʼಎಂದು ಅವರು ಹೇಳಿದ್ದಾರೆ.

ಪಟಿದಾರ್‌ ಆಂದೋಲನದಿಂದಾಗಿ ಕಾಂಗ್ರೆಸ್‌ಗೆ 2015ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸಾಕಷ್ಟು ಸ್ಥಾನಗಳು ಹಾಗೂ 2017ರ ವಿಧಾನಸಭಾ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 77ರಲ್ಲಿ ಗೆಲ್ಲಲು ಸಹಾಯ ಮಾಡಿತ್ತು.

ಬಿಜೆಪಿ ಸೇರುವ ಇಂಗಿತವಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಾರ್ದಿಕ್‌ ʻʻಇಲ್ಲ, ನಾನು ಬಿಜೆಪಿ ಬಗ್ಗೆ ಯೋಚಿಸುವುದಿಲ್ಲ ಹಾಗೂ ಬಿಜೆಪಿ ಜತೆ ಮಾತನಾಡುವುದಿಲ್ಲ,ʼʼ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News