ವಿದೇಶಿ ಕರೆನ್ಸಿ ಸಂಗ್ರಹಿಸಲು ದೀರ್ಘಾವಧಿ ವೀಸಾ ಮಾರಾಟ: ಶ್ರೀಲಂಕಾ ಯೋಜನೆ

Update: 2022-04-26 16:07 GMT
ಸಾಂದರ್ಭಿಕ ಚಿತ್ರ

ಕೊಲಂಬೊ, ಎ.26: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಇದೀಗ ವಿದೇಶಿ ಕರೆನ್ಸಿಯನ್ನು ಆಕರ್ಷಿಸಲು ದೀರ್ಘಾವಧಿಯ ಗೋಲ್ಡನ್ ವೀಸಾ ಮಾರಾಟ ಮಾಡುವುದಾಗಿ ಮಂಗಳವಾರ ಘೋಷಿಸಿದೆ.

ದೇಶದಲ್ಲಿ ವಿದೇಶ ವಿನಿಮಯದ ಕೊರತೆ ಇರುವುದರಿಂದ ಆಹಾರ ಪದಾರ್ಥ ಮತ್ತು ಇಂಧನವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಬಿಕ್ಕಟ್ಟಿನ ಸಂಕಟದಿಂದ ಹೊರಬರಲು ಶತಪ್ರಯತ್ನ ನಡೆಸುತ್ತಿರುವ ಶ್ರೀಲಂಕಾ, ಈಗ ಗೋಲ್ಡನ್ ಪ್ಯಾರಡೈಸ್ ವೀಸಾ ಯೋಜನೆ ಎಂಬ ಹೊಸ ಉಪಕ್ರಮವನ್ನು ಆರಂಭಿಸಿದೆ. ಕನಿಷ್ಟ 1 ಲಕ್ಷ ಡಾಲರ್ ಹಣವನ್ನು ಠೇವಣಿಯಾಗಿ ಇಡುವ ವಿದೇಶೀಯರು ಶ್ರೀಲಂಕಾದಲ್ಲಿ 10 ವರ್ಷ ನೆಲೆಸುವ ಮತ್ತು ಕಾರ್ಯನಿರ್ವಹಿಸಲು ಅವಕಾಶ ನೀಡುವ ಯೋಜನೆ ಇದಾಗಿದೆ. ವಿದೇಶಿಯರು ಶ್ರೀಲಂಕಾದಲ್ಲಿ ವಾಸಿಸುವ ಅವಧಿಯವರೆಗೆ ಈ ಹಣವನ್ನು ಸ್ಥಳೀಯ ಬ್ಯಾಂಕ್‌ನ ಖಾತೆಯಲ್ಲಿ ಜಮೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಸ್ವಾತಂತ್ರ್ಯದ ಬಳಿಕದ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಯೋಜನೆ ಶ್ರೀಲಂಕಾಕ್ಕೆ ನೆರವಾಗಲಿದೆ ಎಂದು ಮಾಹಿತಿ ಇಲಾಖೆಯ ಸಚಿವ ನಲಾಕ ಗೊದಹೆವ ಸುದ್ಧಿಗಾರರಿಗೆ ತಿಳಿಸಿದ್ದಾರೆ.

  ಜೊತೆಗೆ, ಕನಿಷ್ಟ 75,000 ಡಾಲರ್ ಪಾವತಿಸಿ ದೇಶದಲ್ಲಿ ಅಪಾರ್ಟ್‌ಮೆಂಟ್ ಖರೀದಿಸುವ ವಿದೇಶಿಯರಿಗೆ 5 ವರ್ಷದ ವೀಸಾ ಒದಗಿಸುವ ಯೋಜನೆಗೂ ಸರಕಾರ ಅನುಮೋದನೆ ನೀಡಿದೆ. ದೇಶದಲ್ಲಿ ಆಹಾರ, ಇಂಧನ, ಔಷಧದ ತೀವ್ರ ಕೊರತೆಯಿದ್ದು ಇದನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಅಧ್ಯಕ್ಷ ಗೊತಬಯ ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ಕೊಲಂಬೊದಲ್ಲಿರುವ ಅಧ್ಯಕ್ಷರ ಕಚೇರಿಯೆದುರು ಬೃಹತ್ ಪ್ರತಿಭಟನೆ ನಡೆದಿದೆ. ಈ ಮಧ್ಯೆ, ಸಾಂವಿಧಾನಿಕ ಸುಧಾರಣೆಯ ಆಗ್ರಹವನ್ನು ಪರಿಶೀಲಿಸಲು ಸಿದ್ಧ ಎಂದು ಸರಕಾರ ಸಂದೇಶ ರವಾನಿಸಿದೆ. ಸಚಿವರನ್ನು , ನ್ಯಾಯಾಧೀಶರನ್ನು, ಸರಕಾರಿ ಸಿಬಂದಿಗಳನ್ನು ನೇಮಿಸಲು ಅಥವಾ ಉಚ್ಛಾಟಿಸಲು ಅಧ್ಯಕ್ಷರಿಗೆ ಸರ್ವಾಧಿಕಾರ ನೀಡುವ ಕಾನೂನನ್ನು 2019ರಲ್ಲಿ ಗೊತಬಯ ರಾಜಪಕ್ಸ ಜಾರಿಗೊಳಿಸಿದ್ದು, ಇದನ್ನು ರದ್ದುಗೊಳಿಸಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News