×
Ad

ಮೇ 2: ಮಣಿಪಾಲದಲ್ಲಿ ಡಿಸಿಸಿ ಬ್ಯಾಂಕಿನ 111ನೇ ಶಾಖೆ ಉದ್ಘಾಟನೆ

Update: 2022-04-27 21:26 IST

ಉಡುಪಿ : 108 ವರ್ಷಗಳ ಇತಿಹಾಸವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 111ನೇ ಶಾಖೆಯು ಮಣಿಪಾಲದಲ್ಲಿ ಮೇ 2ರ ಸೋಮವಾರ ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಇದರೊಂದಿಗೆ  ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವೂ ನಡೆಯಲಿದೆ ಎಂದು ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲದ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಕಾರ್ಯಾರಂಭ ಮಾಡುವ ಈ ನೂತನ ಶಾಖೆಯು ಸಂಪೂರ್ಣ ಗಣಕೀಕೃತಗೊಂಡ ಹವಾ ನಿಯಂತ್ರಿತ ಶಾಖೆಯಾಗಿದೆ. ಈ ಶಾಖೆಯು ಆರ್‌ಟಿಜಿಎಸ್, ನೆಫ್ಟ್, ರೂಪೇ ಕಾರ್ಡ್ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದರು.

ಜಿಲ್ಲೆಗೆ ಮೊಬೈಲ್ ಬ್ಯಾಂಕಿಂಗ್: ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಎಂಬ ತತ್ವದೊಂದಿಗೆ 2007ರಲ್ಲಿ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿನೂತನ ಮೊಬೈಲ್ ಬ್ಯಾಂಕಿಂಗ್ ಯೋಜನೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದ ಎಸ್‌ಸಿಡಿಸಿಸಿ ಬ್ಯಾಂಕ್, ಈ ಯೋಜನೆಯನ್ನು ಇದೀಗ ಉಡುಪಿಗೂ ವಿಸ್ತರಿಸಲಿದೆ. ಇದರ ಉದ್ಘಾಟನೆಯೂ ಮೇ 2ರಂದು ನಡೆಯಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಡಿಸಿಸಿ ಬ್ಯಾಂಕ್‌ನ ಎಲ್ಲಾ ಸೇವೆಗಳೊಂದಿಗೆ ಸುಸಜ್ಜಿತ ವಾಹನ ನಿರ್ದಿಷ್ಟ ದಿನಗಳಲ್ಲಿ, ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಥಳಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲಿದೆ. ಸದ್ಯಕ್ಕೆ ಉಡುಪಿ ಆಸುಪಾಸಿನ ಕೊಳಲಗಿರಿ, ಹೂಡೆ, ತೆಂಕನಿಡಿಯೂರು, ಉದ್ಯಾವರ, ಮಣಿಪುರ ಹಾಗೂ ದೊಡ್ಡಣಗುಡ್ಡೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ವಿವರಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳನ್ನು ಸಂಘಟನಾತ್ಮಕವಾಗಿ ಬಲಿಷ್ಟಗೊಳಿ ಸುವ ನಿಟ್ಟಿನಲ್ಲಿ ಮೇ 2ರಂದು ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 15000ಕ್ಕೂ ಅಧಿಕ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಉದ್ಘಾಟನೆ: ಎಸ್‌ಸಿಡಿಸಿಸಿ ಬ್ಯಾಂಕಿನ 111ನೇ ಶಾಖೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸ ಲಿದ್ದಾರೆ.

ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ ಕುಮಾರ್ ದೀಪ ಬೆಳಗಿಸಲಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನವೋದಯ ಜಂಟಿ ಭಾದ್ಯತಾ ಗುಂಪುಗಳಿಗೆ ಸಾಲ ವಿತರಿಸಲಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೊಸ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ನೀರಜ್‌ ಕುಮಾರ್ ವರ್ಮ ಉಡುಪಿ ಮೊಬೈಲ್ ಬ್ಯಾಂಕಿಂಗ್‌ನ್ನು ಉದ್ಘಾಟಿಸಿದರೆ, ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಉಳಿದಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿಯ ಉದ್ಯಮಿ ನಾಡೋಜ ಡಾ.ಜಿ.ಶಂಕರ್, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್.ದೇವರಾಜ್ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಯಶ್ಪಾಲ್ ಎ.ಸುವರ್ಣ, ಟಿ.ಅಶೋಕ್ ಪೈ, ದಿನಕರ ಶೆಟ್ಟಿ ಹೆರ್ಗ, ಪುರುಷೋತ್ತಮ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ ಮೊಳಹಳ್ಳಿ, ಬಿ.ಅಶೋಕ್‌ಕುಮಾರ್ ಶೆಟ್ಟಿ ಕುಕ್ಕೆಹಳ್ಳಿ, ರಾಜೇಶ್ ರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News