ಇಂಧನ ತೆರಿಗೆ; ರಾಜ್ಯಗಳನ್ನು ಟೀಕಿಸಿದ ಪ್ರಧಾನಿ ಮೋದಿಗೆ ತಿರುಗೇಟು
ಹೊಸದಿಲ್ಲಿ: ಇಂಧನದ ಮೇಲೆ ರಾಜ್ಯಗಳು ವಿಧಿಸಿದ ಮೌಲ್ಯವರ್ಧಿತ ತೆರಿಗೆಯನ್ನು ಇಳಿಕೆ ಮಾಡದ ಕ್ರಮವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಗಳು ತರಾಟೆಗೆ ತೆಗೆದುಕೊಂಡಿವೆ.
ಪ್ರಧಾನಿ ಮೋದಿಯವರು ಅವಿವೇಕದಿಂದ ಈ ಟೀಕೆ ಮಾಡಿದ್ದು, ಕೇಂದ್ರ ಸರ್ಕಾರ ಹಲವು ತೆರಿಗೆ ಹಾಗೂ ಸೆಸ್‍ಗಳನ್ನು ವಿಧಿಸಿ, ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿವೆ.
ರಾಜ್ಯಗಳು ಇಂಧನದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆಯನ್ನು ರಾಷ್ಟ್ರೀಯ ಹಿತಾಸಕ್ತಿಯ ಸಲುವಾಗಿ ಕಡಿತಗೊಳಿಸಬೇಕು ಎಂದು ಮೋದಿಯವರು ಕೋವಿಡ್-19 ಪರಿಸ್ಥಿತಿ ಮತ್ತು ಪುನಶ್ಚೇತನದ ಬಗೆಗೆ ಚರ್ಚಿಸಲು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಆಗ್ರಹಿಸಿದ್ದರು.
ನವೆಂಬರ್ ನಿಂದ ಅಂದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೀಮಾ ಸುಂಕವನ್ನು ಇಳಿಸಿದರೂ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳು ವ್ಯಾಟ್ ಇಳಿಸಿಲ್ಲ ಎಂದು ಅಸಮಾಧಾನ ಸೂಚಿಸಿದ್ದರು. ಈ ರಾಜ್ಯಗಳು ಬಿಜೆಪಿಯೇತರ ಪಕ್ಷಗಳ ವಶದಲ್ಲಿವೆ.
"ಮೋದಿ ಏಕಮುಖ ಭಾಷಣ ಮಾಡಿದ್ದಾರೆ. ಇದು ತಪ್ಪುದಾರಿಗೆ ಎಳೆಯುವಂಥದ್ದು ಮತ್ತು ಸರಿಯಲ್ಲ. ನಮಗೆ ಮುಖ್ಯಮಂತ್ರಿಗಳಿಗೆ ಪ್ರತಿ ಹೇಳಿಕೆ ನೀಡಲು ಅವಕಾಶ ಇರಲಿಲ್ಲ. ನಾವು ಕೇವಲ ಅವರನ್ನು ನೋಡುತ್ತಾ, ಕೇಳುತ್ತಾ ಇರಬೇಕಾಯಿತು. ಅವರ ವಾದವನ್ನು ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ" ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಶೇಷ ಸೀಮಾ ಸುಂಕ, ಹೆಚ್ಚುವರಿ ಸೀಮಾಸುಂಕ, ರಸ್ತೆ ಸೆಸ್‍ನಂಥ ಹಲವು ತೆರಿಗೆಗಳನ್ನು ವಿಧಿಸಿಯೂ ನುಣುಚಿಕೊಳ್ಳುತ್ತಿದೆ ಎಂದು ತೆಲಂಗಾಣ ಹಣಕಾಸು ಸಚಿವ ಟಿ.ಹರೀಶ್ ರಾವ್ ಟೀಕಿಸಿದ್ದಾರೆ. 2015ರ ಬಳಿಕ ತೆಲಂಗಾಣ ಸರ್ಕಾರ ವ್ಯಾಟ್ ಹೆಚ್ಚಿಸಿಲ್ಲ. ಆದರೆ ಮೋದಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಸೆಸ್‍ನಿಂದ 24 ಲಕ್ಷ ಕೋಟಿ ಆದಾಯ ಗಳಿಸಿದೆ. ತೆಲಂಗಾಣಕ್ಕೆ ಇದರಲ್ಲಿ 54 ಸಾವಿರ ಕೋಟಿ ಪಾಲು ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಸೆಸ್ ಹೆಸರಿನಲ್ಲಿ ನಿರಾಕರಿಸಿದೆ ಎಂದು ಆಪಾದಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಕಚೇರಿ ಕೂಡಾ ಪ್ರಧಾನಿ ಹೇಳಿಕೆಯನ್ನು ಅಲ್ಲಗಳೆದಿದ್ದು, ಪೆಟ್ರೋಲ್- ಡೀಸೆಲ್ ಮಾರಾಟದಿಂದ ಕೇಂದ್ರ ಪಡೆಯುವ ತೆರಿಗೆ ಪ್ರಮಾಣದ ಅಂಕಿ ಅಂಶ ನೀಡಿ, ರಾಜ್ಯಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ ಎನ್ನುವುದು ಸರಿಯಲ್ಲ ಎಂದು ಹೇಳಿವೆ.
ಇಂಧನವನ್ನು ಕೂಡಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಡಿ ತರುವಂತೆ ಜಾರ್ಖಂಡ್ ಹಾಗೂ ಪಂಜಾಬ್ ಆಗ್ರಹಿಸಿವೆ.